ಜಿಲ್ಲೆ

1ಲಕ್ಷ ಸಸಿ ನೆಟ್ಟು ಪೋಷಣೆ ಮಾಡಿ

ತುಮಕೂರು ಡೆಸ್ಕ್

ಇಲಾಖೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಖಡಕ್​ ಸೂಚನೆ

ತುಮಕೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಇಲಾಖೆಯಿಂದ ನಡೆಯಲಿರುವ ವನಮಹೋತ್ಸವದ ವೇಳೆ ಜಿಲ್ಲೆಯಲ್ಲಿ 1 ಲಕ್ಷ ಸಸಿ ನೆಟ್ಟು ಪೋಷಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಖಡಕ್​ ಸೂಚನೆ ನೀಡಿದರು. ನಗರದ ಅರಣ್ಯ ಭವನದಲ್ಲಿ ಶನಿವಾರ ಇಲಾಖೆ ಪ್ರಗತಿ ಪರಿಶೀಲಾ ಸಭೆಯಲ್ಲಿ ಅಧಿಕಾರಿಗಳ ಕೊಡುವ ಅಂಕಿ&ಅಂಶಕ್ಕೂ ವಾಸ್ತವವಾಗಿ ಗಿಡ ನೆಟ್ಟಿರುವುದಕ್ಕೂ ಅಜಗಜಾಂತರ ಇರಲಿದೆ. ಜಿಲ್ಲೆಯಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್​ ಇಲಾಖೆ ಹಾಗೂ ಪಂಚಾಯಿತಿಗಳ ಸಹಕಾರ ಪಡೆಯುವಂತೆ ನಿರ್ದೇಶನ ನೀಡಿದರು.

ತುಮಕೂರು ಜಿಲ್ಲೆ ಮತ್ತು ಹಾಸನ ವೃತ್ತದಲ್ಲಿ ಅರಣ್ಯ ಮತ್ತು ಕಂದಾಯ ಜಮೀನಿನ ಜಂಟಿ ಸರ್ವೇ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈಗಾಗಲೇ ಸೆಕ್ಷನ್​ 33ರಡಿ ಅರಣ್ಯ ಎಂದು ನಿರ್ಧರಿಸಲಾಗಿರುವ ಜಮೀನಿನ ಇಂಡೀಕರಣ ಮಾಡಿಸಿ, ಆರ್​ಟಿಸಿಯಲ್ಲಿ ಅರಣ್ಯ ಎಂದು ನಮೂದಿಸುವಂತೆ ಆ ಮೂಲಕ ಅಕ್ರಮ ಒತ್ತುವರಿ, ಅಕ್ರಮ ಮಂಜೂರಾತಿಗೆ ಕಡಿವಾಣ ಹಾಕುವಂತೆ ತಾಕೀತು ಮಾಡಿದರು.

ಚಿರತೆ ಸೆರೆ ಕ್ರಮಕ್ಕೆ ಸೂಚನೆ: ತುಮಕೂರು ಜಿಲ್ಲೆಯಲ್ಲಿ ಚಿರತೆಗಳು ನಾಡಿಗೆ ಬರುವ ವರದಿಗಳು ಸಾಮಾನ್ಯವಾಗಿದ್ದು, ಈ ಸಂಬಂಧ ಸಾರ್ವಜನಿಕರಿಂದ ಮಾಹಿತಿ ಬಂದ ಕೂಡಲೇ ಬೋನುಗಳನ್ನು ಇಟ್ಟು ಸೆರೆ ಹಿಡಿಯುವ ತ್ವರಿತ ಕ್ರಮಕೃಗೊಳ್ಳಬೇಕು. ಕಾಡಿನಂಚಿನ ಜನರಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಈಶ್ವರ ಖಂಡ್ರೆ ಸೂಚನೆ ನೀಡಿದರು. ಕೊರಟಗೆರೆ ತಾಲೂಕು ತಿಮ್ಲಾಪುರ ಕರಡಿಧಾಮದ ಸುತ್ತಮುತ್ತ ಕಲ್ಲುಗಣಿಗಾರಿಕೆಯಿಂದ ಕರಡಿ ಆವಾಸಸ್ಥಾನಕ್ಕೆ ಧಕ್ಕೆ ಆಗಿದೆ. ಈ ಬಗ್ಗೆ ಕ್ರಮವಹಿಸಲು ಮೀನಮೇಷ ಎಣಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರ ಬಳಿ, ಅರಣ್ಯಾಧಿಕಾರಿಗಳು ಅಂತಹದ್ದೇನು ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿಲ್ಲವೆಂಬ ಸಬೂಬು ಹೇಳಿ ಜಾರಿಕೊಂಡರು.

ಆಂಜನೇಯ ದೇವಾಲಯಕ್ಕೆ ಭೇಟಿ: ಇದಕ್ಕೂ ಮುನ್ನ ಗುಬ್ಬಿ ತಾಲೂಕಿನ ಯಡನಹಳ್ಳಿ ಮಜರೆ ಕೋಡಿ ಗ್ರಾಮದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ದೈವಿವನದ ವೀಕ್ಷಣೆ ಮಾಡಿದರು. ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮನಿಧಿಯಿಂದ ಜಿಲ್ಲೆಯ ಗಣಿಬಾಧಿತ ಪ್ರದೇಶದಲ್ಲಿ ಕೈಗೊಳ್ಳಲಾಗಿರುವ ಪರಿಸರ ಪುನಶ್ಚೇತನ ಕ್ರಮಗಳ ಕುರಿತಂತೆ ಮುಂದಿನ ವಾರ ಪರಾಮರ್ಶೆ ನಡೆಸಲಿದ್ದು, ಮಾಹಿತಿ ಸಿದ್ಧವಾಗಿಟ್ಟುಕೊಳ್ಳುವಂತೆ ಸಚಿವರು ತಿಳಿಸಿದರು. ಸಭೆಯಲ್ಲಿ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಏಳುಕೊಂಡಲ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್​.ಅನುಪಮಾ ಮತ್ತಿತರರು ಪಾಲ್ಗೊಂಡಿದ್ದರು.