ಮೈಸೂರು: ಮೈಸೂರು ರಂಗಾಯಣ ಪ್ರಸ್ತುತಪಡಿಸಿದ ‘ಟಿಪ್ಪು ನಿಜ ಕನಸುಗಳು’ ನಾಟಕ ಯಶಸ್ಸು ಕಂಡಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾ.19ರಂದು ನಡೆಯುವ 50ನೇ ಪ್ರದರ್ಶನದೊಂದಿಗೆ ಸಂಭ್ರಮಾಚರಣೆ ಮಾಡಲಾಗುವುದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ಈವರೆಗೆ 46 ಪ್ರದರ್ಶನ ಕಂಡಿದೆ. ಮಾ.12, 15, 18, 19ರಂದು ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶವಿದೆ. ಇದರಲ್ಲಿ 19ರಂದು 50ನೇ ಪ್ರದರ್ಶನವಾಗಿದೆ. ಅಂದು ಕಲಾವಿದರು, ತಜ್ಞರನ್ನು ಸನ್ಮಾನಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಂಗಾಯಣದ ತಂಡ 3 ಹಂತದಲ್ಲಿ ರಾಜ್ಯಾದ್ಯಂತ ಪ್ರದರ್ಶನ ನೀಡಿದೆ. ಮೊದಲ ಹಂತದಲ್ಲಿ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಮಂಗಳೂರು, ಪುತ್ತೂರು, ಪೊನ್ನಂಪೇಟೆ, ಮಂಡ್ಯ ಜಿಲ್ಲೆಗಳಲ್ಲಿ 14 ಪ್ರದರ್ಶನ ನೀಡಿದೆ.
2ನೇ ಹಂತದಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಕುಲಬುರಗಿ, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲಿ 10 ಪ್ರದರ್ಶನಗಳು, 3ನೇ ಹಂತದಲ್ಲಿ ಕುಶಾಲನಗರ, ತೀರ್ಥಹಳ್ಳಿ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಕೋಲಾರ, ಚಾಮರಾಜನಗಗಳಲ್ಲಿ 9 ಪ್ರದರ್ಶನ ನೀಡಿದೆ. ಮೈಸೂರಿನಲ್ಲಿ ಇದುವರೆಗೂ 13 ಪ್ರದರ್ಶನ ಕಂಡಿದೆ. ಹೀಗೆ ಒಟ್ಟು 46 ಪ್ರದರ್ಶನವಾಗಿದೆ ಎಂದು ಮಾಹಿತಿ ನೀಡಿದರು.
ಈ ನಾಟಕ ಪ್ರದರ್ಶನ ದಾಖಲೆ ಸ್ಥಾಪಿಸಿದೆ. ಎಲ್ಲ ಕಡೆ ಟಿಕೆಟ್ ಸೋಲ್ಡ್‌ಔಟ್ ಆಗಿದ್ದವು. ಸರಿಸುಮಾರು 40 ಸಾವಿರ ಪ್ರೇಕ್ಷಕರು ನಾಟಕವನ್ನು ವೀಕ್ಷಿಸಿದ್ದಾರೆ ಎಂದು ತಿಳಿಸಿದರು.
ಖರ್ಚು-ವೆಚ್ಚ, ಆದಾಯವನ್ನು ಪರಿಶೀಲಿಸಲಾಗುತ್ತಿದ್ದು, ಮುಂದೆ ಅದರ ವಿವರ ನೀಡಲಾಗುವುದು. 38 ಜನ ನಟರು, ತಂತ್ರಜ್ಞರು ಸೇರಿರುವ ರಂಗಾಯಣ ರೆಪರ್ಟರಿ ತಂಡ ರಂಗಪ್ರವಾಸ ಮುಗಿಸಿದೆ. ಭಾರತೀಯ ರಂಗಭೂಮಿಯಲ್ಲಿ ಯಶಸ್ವಿ ರಂಗಾಯಣ ಇದಾಗಿದೆ ಎಂದು ತಿಳಿಸಿದರು
.
ಈ ನಾಟಕಕ್ಕೆ ಸರ್ಕಾರದಿಂದ ಯಾವುದೇ ಅನುದಾನ ನೀಡಿಲ್ಲ. ಪ್ರೇಕ್ಷಕರು ಟಿಕೆಟ್ ಖರೀದಿಸಿದ ಹಣದಿಂದಲೇ ಪ್ರದರ್ಶನ ನೀಡಲಾಗಿದೆ. ಸ್ಥಳೀಯ ಸಂಘಟಕರು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದು, ತಂಡದ ವಸತಿ, ಊಟೋಪಚಾರ ನೋಡಿಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದ ಜಿಲ್ಲಾ ರಂಗಮಂದಿರಗಳಲ್ಲಿ ಪ್ರದರ್ಶನ ನೀಡಲಾಗಿದೆ ಎಂದು ಹೇಳಿದರು.
ಟಿಪ್ಪು ನಿಜ ಕನಸುಗಳು ನಾಟಕ ಕೃತಿ 12ನೇ ಮುದ್ರಣ ಕಂಡಿದೆ. 20 ಸಾವಿರ ಪ್ರತಿಗಳು ಈ ವರೆಗೆ ಮಾರಾಟವಾಗಿವೆ. 40 ಸಾವಿರ ಜನ ನಾಟಕವನ್ನು ಓದಿದ್ದಾರೆಂದು ಅಂದಾಜಿಸಲಾಗಿದೆ. ಅಲ್ಪಾವಧಿಯಲ್ಲಿ ಒಂದು ನಾಟಕ ಕೃತಿಯ ಓದುವಿಕೆಯಲ್ಲೂ ದಾಖಲೆ ಕಂಡಿದೆ ಎಂದರು. ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು.