ಜಿಲ್ಲೆ

ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರಿನ ಮಾಹಿತಿ ಕೊಡಿ: ಜಿಲ್ಲಾ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ಒತ್ತಾಯ

ಕೆ.ಎನ್.ರಾಘವೇಂದ್ರ

ಮಂಡ್ಯ: ಬಿಳಿಗುಂಡ್ಲುವಿನಿಂದ ತಮಿಳುನಾಡಿಗೆ ಪ್ರತಿದಿನ ಎಷ್ಟು ಕಾವೇರಿ ನೀರು ಹರಿದು ಹೋಗುತ್ತಿದೆ ಎಂಬುದು ಯಾರಿಗೂ ಅರಿವಿಲ್ಲ. ಆದ್ದರಿಂದ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ 19ನೇ ಸೋಮವಾರದ ಪ್ರತಿಭಟನೆಯಲ್ಲಿ ಮಾತನಾಡಿದರು. ಕೆಆರ್‌ಎಸ್‌ಗೆ ಎಷ್ಟು ಒಳಹರಿವಿದೆ, ಎಷ್ಟು ಹೊರ ಹರಿವಿದೆ ಎಂಬ ಮಾಹಿತಿ ನೀಡುತ್ತಿದೆ. ಆದರೆ ಬಿಳಿಗುಂಡ್ಲುವಿನಲ್ಲಿ ಕಾವೇರಿಯಿಂದ ಎಷ್ಟು ನೀರು ಹೋಗುತ್ತಿದೆ. ಯಾರು ಮಾಪನ ಮಾಡುತ್ತಿದ್ದಾರೆ ಂಬುದು ಗೊತ್ತಿಲ್ಲ. ಆದ್ದರಿಂದ ಸರ್ಕಾರ ಈ ವಿಚಾರದ ಬಗ್ಗೆ ಪ್ರಾಧಿಕಾರಕ್ಕೆ ಹೇಳಿ ಪ್ರತಿನಿತ್ಯ ಎಷ್ಟು ನೀರು ಹೋಗುತ್ತದೆ ಎನ್ನುವುದನ್ನು ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕಳೆದ 9 ತಿಂಗಳಿಂದ ನಾವು ನಿರಂತರವಾಗಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಡ ತರುವ ಕರ್ತವ್ಯವನ್ನು ಮಾಡುತ್ತಿದ್ದೇವೆ. ಇನ್ನೇನು ವಿಧಾನ ಮಂಡಲದ ಅಧಿವೇಶನ ಶುರುವಾಗುವ ಸಮಯ ಬಂದಿದೆ. ನಾವು ಚಳವಳಿಯನ್ನ ಹಮ್ಮಿಕೊಂಡ ದಿನದಿಂದಲೂ ರಾಜ್ಯಸರ್ಕಾರಕ್ಕೆ ಹೇಳಿದ್ದೇವೆ. ಜಂಟಿ ಅಧಿವೇಶನವನ್ನು ಕರೆಯಬೇಕು. ವಿಷಯವನ್ನು ಒಟ್ಟಾರೆ ಚರ್ಚಿಸಿ ಒಂದು ನಿಲುವಿಗೆ ಬರಬೇಕು. ವಾಸ್ತವಾಂಶ ತೆರೆದಿಡಬೇಕು.ಹಾಗೇನೇ ಸುಪ್ರೀಂಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಈ ವಿಷಯದಲ್ಲಿ ಮುಖ್ಯಮಂತ್ರಿ, ನೀರಾವರಿ ಸಚಿವರ ಜತೆಗೆ ನೂತನ ಸಂಸದರಾಗಿ ಆಯ್ಕೆಯಾಗಿರುವ ಕುಮಾರಸ್ವಾಮಿ ಅವರು ಅವರು ಮೈತ್ರಿ ಸರ್ಕಾರ ಆಗಿರುವ ಕಾರಣ ಪ್ರಧಾನ ಮಂತ್ರಿಗಳ ಮಟ್ಟದಲ್ಲಿ ಇದನ್ನು ತೆಗೆದುಕೊಂಡು ಹೋಗಿ ಕಾವೇರಿ ನೀರಿನ ಸಮಸ್ಯೆ ಅಂತ್ಯಗೊಳಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಬೋರಲಿಂಗಯ್ಯ, ಫಯಾಜ್, ಎಂ.ಎಲ್.ತುಳಸೀಧರ, ಎಸ್.ಪಿ.ನಾರಾಯಣಸ್ವಾಮಿ, ದಸಂಸ ಎಂ.ವಿ.ಕೃಷ್ಣ, ಜಯರಾಮು ಜಯಪುರ, ಎ.ಎಲ್.ಬಸವೇಗೌಡ ಇತರರಿದ್ದರು.