ಶಿವಮೊಗ್ಗ: ರಾಜ್ಯದಲ್ಲಿ ಸುಮಾರು 1,900 ಅನಧಿಕೃತ ಶಾಲೆಗಳನ್ನು ಸರ್ಕಾರ ಗುರುತಿಸಿದೆ. ಕಾನೂನು ಉಲ್ಲಂಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಅನುದಾನಿತ ಶಾಲೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಈಗಿರುವ ನಿರ್ಬಂಧವನ್ನು ಸಡಿಲಿಸಲು ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ 600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 11 ಶಾಲೆಗಳಿದ್ದು, 41 ಶಾಲೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸರ್ಕಾರಿ ಶಾಲೆಗಳಿಗೆ ಸಕಾಲಕ್ಕೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ನೀಡಲಾಗುತ್ತಿದೆ. ಮೂರು ಪರೀಕ್ಷೆಗಳನ್ನು ನಡೆಸಲಾಗುತಿದ್ದು, ಉತ್ತೀರ್ಣರಾಗುವ ಎಲ್ಲರಿಗೂ ಕಾಲೇಜಿನಲ್ಲಿ ಪ್ರವೇಶ ಸಿಗಲಿದೆ. ತಡವಾಗಿ ಸೇರುವ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್ ಮೂಲಕ ಪಾಠ ಮಾಡಲಾಗುವುದು. ಅತಿಥಿ ಶಿಕ್ಷಕರನ್ನು ಈಗಾಗಲೇ ನೇಮಕ ಮಾಡಿದ್ದು, 13 ಸಾವಿರ ಕಾಯಂ ಶಿಕ್ಷಕರು ನೇಮಕವಾಗಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 5 ಸಾವಿರ ಶಿಕ್ಷಕರ ನೇಮಕ ಆಗಿತ್ತು ಎಂದು ಸಚಿವರು ಹೇಳಿದರು.