ಜಿಲ್ಲೆ

19 ರಿಂದ ಅನಿರ್ಧಿಷ್ಟಾವಧಿ ಮುಷ್ಕರ:ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಗುತ್ತಿಗೆ ನೌಕರರ ಎಚ್ಚರಿಕೆ

ಹಾಸನ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರವರಿ 19ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಮಾಡುತ್ತಿರುವುದಾಗಿ ಕರ್ನಾಟಕ ರಾಜ್ಯ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದಿಂದ ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷರಾದ ರಾಮಚಂದ್ರ ಅವರು ಮಾತನಾಡಿ, ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯಡಿಯಲ್ಲಿ ವಿವಿಧ ವೃಂದ ವಿಭಾಗಗಳಲ್ಲಿ ರಾಜ್ಯಾದ್ಯಂತ ಕಳೆದ ಇಪ್ಪತ್ತು ವರ್ಷಗಳಿಗಿಂತ ಅಧಿಕವಾಗಿ 1800 ನೌಕರರು ಎಚ್‌ಐವಿ ನಿಯಂತ್ರಣ ಕಾರ್ಯದಲ್ಲಿ ಮತ್ತು ಎಚ್‌ಐವಿ ಪರೀಕ್ಷೆ, ರಕ್ತ ಪರೀಕ್ಷೆಯನ್ನು ನಡೆಸಿ, ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಹಾಗೂ ಹದಿಹರೆಯದ ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡುವುದು, ಆರ್‌ಆರ್‌ಸಿ ಕ್ಲಬ್‌ಗಳನ್ನು ಸ್ಥಾಪಿಸಿ ಅವುಗಳ ಮೂಲಕ ಯುವ ಜನತೆಯಲ್ಲಿ ಎಚ್‌ಐವಿ ಕುರಿತು ಅರಿವು, ಜಾಗೃತಿ ಮೂಡಿಸುವ ಮತ್ತು ರಕ್ತದಾನದ ಮಹತ್ವವನ್ನು ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಿಬಿಎಸ್ ಕ್ಯಾಂಪ್, ಸಂತೆ, ಜಾತ್ರೆಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಸಾಮಾನ್ಯ ಜನರ ಬಳಿಗೆ ತೆರಳಿ ಸ್ಥಳದಲ್ಲಿಯೇ ಎಚ್‌ಐವಿ ಪರೀಕ್ಷೆ ನಡೆಸಿ ಶೀಘ್ರ ಸೋಂಕು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯನ್ನು ನೀಡಿ ಜೀವಿತಾವಧಿಯನ್ನು ವಿಸ್ತರಿಸುವಂತಹ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಸಂಘಎಂದರು.
ದೇಶವೇ ಹೆಮ್ಮೆಪಡುವಂತಹ ಕಾರ್ಯದಲ್ಲಿ ತೊಡಗಿರುವ ನೌಕರರು ಎರೆಡೂವರೆ ದಶಕಗಳಿಗಿಂತ ಹೆಚ್ಚು ಕಾಲ ಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಕಾಯಂ ನೌಕರರಿಗೆ ನೀಡುವ ಯಾವುದೇ ಸೌಲಭ್ಯಗಳು ಇರದಿದ್ದರೂ, ಕೇವಲ ಕ್ರೂಡೀಕೃತ ವೇತನಕ್ಕೆ ದುಡಿಯುತ್ತಿದ್ದೇವೆ. ಕಾಲ ಬದಲಾದಂತೆ ಮನುಷ್ಯನ ಅಗತ್ಯತೆಗಳು, ಬೇಡಿಕೆಗಳು ಬದಲಾಗುತ್ತವೆ. ಅದಕ್ಕೆ ತಕ್ಕಂತೆ ವೇತನದಲ್ಲಿ ಹೆಚ್ಚಳವಾಗದೇ ಇದ್ದರೆ ನೌಕರರ ಜೀವನ ನಿರ್ವಹಣೆ ದುಸ್ತರವಾಗುವುದರಲ್ಲಿ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಹಲವು ಬಾರಿ ಮನವಿ ಮಾಡಿದರೂ ಸಹ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆ, ಸಚಿವರು ಮೌನಕ್ಕೆ ಶರಣಾಗಿದ್ದಾರೆ. ಹೀಗಾಗಿ 19ರಿಂದ ಐಸಿಟಿಸಿ, ಎಆರ್‌ಟಿ, ಡಿಎಸ್‌ಆರ್‌ಸಿ, ಎಸ್‌ಆರ್‌ಎಲ್ ಕೇಂದ್ರಗಳನ್ನು ಸ್ಥಗಿತಗೊಳಿಸಿ ಬೆಂಗಳೂರಿನ ಸ್ವಾತಂತ್ರ್ಯ ಉಧ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಮಾಡಲು ಎಲ್ಲಾ ನೌಕರರು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಗುತ್ತಿಗೆ ನೌಕರರ ರಾಜ್ಯ ಉಪಾಧ್ಯಕ್ಷ ರವಿಕುಮಾರ್, ಅಶೋಕ್, ಅನಿಲ್, ಜಯಣ್ಣ, ಸುನೀತಾ, ನೇತ್ರಾ, ಮಂಜುಳಾ, ವೀಣಾ, ಅರವಿಂದ್ ಇತರರು ಉಪಸ್ಥಿತರಿದ್ದರು.