ತುಮಕೂರು: ದೆಹಲಿಯ ತಬ್ಲಿಘಿ ಜಮಾತ್ ಪ್ರಾರ್ಥನಾ ಸಭೆಗೆ ತೆರಳಿದ್ದ 19 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಕರೊನಾ ಸೋಂಕಿನಿಂದ ಮೃತಪಟ್ಟ ವೃದ್ಧನ 13 ವರ್ಷದ ಮಗನನ್ನು ಹೊರತುಪಡಿಸಿ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಯಾರಿಗೂ ಸೋಂಕು ಹರಡಿಲ್ಲವೆಂಬ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯಲ್ಲಿ ಈಗ ಮತ್ತೆ ಆತಂಕ ಎದುರಾಗಿದೆ.
ಮಾ.8 ರಿಂದ 20ರವರೆಗೆ ಏರ್ಪಡಿಸಿದ್ದ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದವರಲ್ಲಿ ಗುರುವಾರ 19 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಇವರನ್ನು ವೈದ್ಯಕೀಯ ತಪಾಸಣೆಗೆ (ಮೆಡಿಕಲ್ ಸ್ಕ್ರೀನಿಂಗ್) ಒಳಪಡಿಸಲಾಗಿದ್ದು, ಯಾರಲ್ಲೂ ರೋಗ ಲಕ್ಷಣಗಳು ಕಂಡುಬಂದಿಲ್ಲ. ಎಲ್ಲರ ರಕ್ತ ಹಾಗೂ ಗಂಟಲು ದ್ರವ ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಐಸೋಲೇಷನ್‌ನಲ್ಲಿ 19 ಮಂದಿ: ವೈದ್ಯಕೀಯ ತಪಾಸಣೆಗೊಳಪಟ್ಟಿರುವ 19 ಮಂದಿಯನ್ನು ಐಸೋಲೇಷನ್‌ನಲ್ಲಿಡಲಾಗಿದೆ. ಈವರೆಗೂ ದೆಹಲಿಗೆ ತೆರಳಿದ್ದ 19 ಜನರನ್ನು ಪತ್ತೆ ಹಚ್ಚಲಾಗಿದೆ. ಕೆಲವರು ಇವರಲ್ಲಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರೆ ಮತ್ತೆ ಕೆಲವರು ನಿಜಾಮುದ್ದೀನ್‌ನಲ್ಲಿ ಸ್ನೇಹಿತರನ್ನು ಭೇಟಿ ಮಾಡಲು ತೆರಳಿದ್ದವರೂ ಇದ್ದಾರೆ. ಮಾ.8 ರಿಂದ 20ರವರೆಗೂ ಇನ್ನೂ ಹೆಚ್ಚಿನ ಜನ ಜಿಲ್ಲೆಯಿಂದ ಹೋಗಿರುವ ಸಾಧ್ಯತೆ ಇದೆ.
ಪತ್ತೆ ಹಚ್ಚಿರುವ 19 ಜನರ ಪೈಕಿ 10 ಮಂದಿಯನ್ನು ಮಸೀದಿಯಲ್ಲೇ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಜಮಾತ್‌ಗೆ ತೆರಳಿದ್ದವರ ಮಾಹಿತಿ ನೀಡಿ: ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ತೆರಳಿದವರ ಬಗ್ಗೆ ಮಾಹಿತಿಯುಳ್ಳವರು ತುರ್ತಾಗಿ ಕಂಟ್ರೋಲ್ ರೂಂ ಸಂಖ್ಯೆ: 0816-2257368ಕ್ಕೆ ಕರೆ ಮಾಡಿ ತಿಳಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕರೋನಾ ಅಂಕಿಅಂಶ(ಏ.2ಕ್ಕೆ) : ಒಟ್ಟು ಗಮನಕ್ಕಿರುವವರು-480, ಹೋಮ್ ಕ್ವಾರಂಟೈನ್-311, ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರುವವರು-84, 28ದಿನ ಮನೆಯಲ್ಲಿದ್ದವರು-59, ಪರೀಕ್ಷೆಗೆ ಒಳಗಾದವರು-132, ನೆಗೆಟಿವ್ ವರದಿ-115, ಪಾಸಿಟಿವ್-02, ವರದಿ ಬರಬೇಕಿರುವುದು-12, ಸಾವು-01, ಸ್ಯಾಂಪಲ್ ರಿಜೆಕ್ಟೆಡ್-03.