ಜಿಲ್ಲೆ

18ರಂದು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ: ಮಾಯಸಂದ್ರದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ

Tumakuru

ತುಮಕೂರು: ತುರುವೇಕೆರೆ ತಾಲೂಕು ಮಾಯಸಂದ್ರದಲ್ಲಿ ಜೂ.18ರಂದು ನಡೆಯಲಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್​.ಅಶೋಕ್​ ಭಾಗವಹಿಸಲಿದ್ದಾರೆ.

ಕಂದಾಯ ಸಚಿವರ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿ ವೈ.ಎಸ್​ ಪಾಟೀಲ, ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಯಾಗಿಸಬೇಕು. ಈ ಎಲ್ಲ ಇಲಾಖೆಗಳು ಇಲಾಖೆಯ ಪ್ರಯೋಜನಗಳನ್ನು ತಿಳಿಸಲು 30ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಮಾಹಿತಿ ನೀಡಬೇಕಲ್ಲದೇ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಬೇಕು ಎಂದು ಆದೇಶಿಸಿದರು.

ಆರೋಗ್ಯ ಇಲಾಖಾಧಿಕಾರಿಗಳು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಬೇಕಲ್ಲದೆ, ಶಿಬಿರದಲ್ಲಿ ಆಯುಷ್ಮಾನ್​ ಕಾರ್ಡ್​ ವಿತರಣೆ ಹಾಗೂ ಕಣ್ಣಿನ ತಪಾಸಣೆ ನಡೆಸಿ ಕನ್ನಡಕಗಳನ್ನು ವಿತರಣೆ ಮಾಡಬೇಕು. ಸಾರ್ವಜನಿಕರು ನೀಡುವ ಅಹವಾಲುಗಳನ್ನು ಸ್ವೀಕರಿಸುವ ಹಾಗೂ ಪರಿಹಾರ ಕಲ್ಪಿಸುವ ಸಂಬಂಧ ಎಲ್ಲ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿರಬೇಕು. ಕಂದಾಯ ಇಲಾಖೆಗೆ ಸಂಬಂಧಿಸಿದ ಅಹವಾಲು ಸಲ್ಲಿಸುವವರಿಗೆ ಹಿಂಬರಹ ನೀಡುವ ವ್ಯವಸ್ಥೆಯಾಗಬೇಕು ಎಂದು ಆದೇಶಿಸಿದರು.

ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಬಿ. ನಾಗೇಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್​, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ತೋಟಗಾರಿಕಾ ಉಪನಿರ್ದೇಶಕ ಬಿ.ರು, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣಪ್ಪ, ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ್​, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್​, ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ ಇದ್ದರು.

ಭದ್ರತಾ ವ್ಯವಸ್ಥೆ ಕಲ್ಪಿಸಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಸ್ಥಳದ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದರೊಂದಿಗೆ ಶೌಚಗೃಹ, ಕುಡಿಯುವ ನೀರು ಸೇರಿ ಮೂಲ ಸೌಕರ್ಯ ಕಲ್ಪಿಸಬೇಕು. ಸ್ಥಳಿಯ ಕಲಾವಿದರಿಂದ ಸಾಂಸತಿಕ ಕಾರ್ಯಕ್ರಮವನ್ನು ಆಯೋಜಿಸಲು ಕನ್ನಡ ಮತ್ತು ಸಂಸತಿ ಇಲಾಖೆ ಕ್ರಮವಹಿಸಬೇಕು. ಇನ್ನೂ ಸಾರ್ವಜನಿಕರಿಗೆ ಗೊಂದಲ ಉಂಟಾಗದಂತೆ ವೇದಿಕೆ ಹಾಗೂ ಮಳಿಗೆಗಳ ಬಳಿ ಭದ್ರತಾ ವ್ಯವಸ್ಥೆ ಕಲ್ಪಿಸಲು ಪೊಲೀಸ್​ ಇಲಾಖೆಗೆ ಡಿಸಿ ನಿರ್ದೇಶನ ನೀಡಿದರು.

ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ

ತುರುವೇಕೆರೆ: ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಯ ಸಹಯೋಗದೊಂದಿಗೆ ಮಾಯಸಂದ್ರದಲ್ಲಿ ಜೂ.18ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈಎಸ್​. ಪಾಟೀಲ್​ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು. ಅನಂತರ ಜಿಲ್ಲಾಧಿಕಾರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಸಭೆ ನಡೆಸಿದರು. ಅಂದು ಕಂದಾಯ ಸಚಿವ ಆರ್​. ಅಶೋಕ್​ ಮಾಯಸಂದ್ರದಲ್ಲಿ ಗ್ರಾಮವಾಸ್ತವ್ಯ ಹೂಡಲಿದ್ದು, ಅಲ್ಲಿ ಈ ಭಾಗದ ರೈತರು ಹಾಗೂ ಸಾರ್ವಜನಿಕರ ಕುಂದು ಕೊರತೆ ಆಲಿಸಲಿದ್ದಾರೆ. ಮಾಯಸಂದ್ರ ಶಾಲೆ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ಡಿಸಿ ತಿಳಿಸಿದರು.