ರಾಮನಗರ : ಚನ್ನಪಟ್ಟಣ ತಾಲೂಕು ವಂದಾರಗುಪ್ಪೆ ಗ್ರಾಮದ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ 2025ನೇ ಸಾಲಿನ ಜಾನುವಾರು ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಜ. 11 ರಿಂದ 21ವರೆಗೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 18ರಂದು ಕೆಂಗಲ್ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದೆ. ಜಾತ್ರಾ ಸಂದರ್ಭದಲ್ಲಿ ನಿರಂತರವಾಗಿ ವಿದ್ಯುತ್ ಪೂರೈಸಬೇಕು, ಸಾರ್ವಜನಿಕ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಕೈಗೊಳ್ಳಬೇಕು. ದನಗಳ ಜಾತ್ರಾ ಸಮಯದಲ್ಲಿ ಹಾಗೂ ರಥೋತ್ಸವ ದಿನದಂದು ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನಕ್ಕೆ ನಿಯೋಜಿಸಲು ಕ್ರಮವಹಿಸುವಂತೆ ಸಂಬಂಧಿಸಿದವರಿಗೆ ತಿಳಿಸಿದರು.
ಯಾವುದೇ ಅವಘಡ ಸಂಭವಿಸಬಾರದು, ಮುಖ್ಯವಾಗಿ ಅಗ್ನಿ ಅವಘಡಗಳು ಸಂಭವಿಸದಂತೆ ಅಗ್ನಿಶಾಮಕ ದಳ ಕಟ್ಟೆಚ್ಚರವಹಿಸಬೇಕು. ಜಾನುವಾರು ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪಾಲಂಕಾರ ಮಾಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ಥಳದಲ್ಲಿ ಆರೋಗ್ಯ ಇಲಾಖೆವತಿಯಿಂದ ಆಂಬುಲೆನ್ಸ್ ವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಬೇಕು ಹಾಗೂ ರಾಸುಗಳಿಗೆ ಚಿಕಿತ್ಸೆ ನೀಡಲು ಪಶುಪಾಲನಾ ಇಲಾಖೆಯಿಂದ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಬೇಕು ಎಂದು ತಿಳಿಸಿದರು.
ಪ್ರಸಾದ ತಯಾರಿಸುವ ಸ್ಥಳದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಅಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು, ಪ್ರಸಾದ ಮತ್ತು ಕುಡಿಯುವ ನೀರು ಆರೋಗ್ಯ ಸಂರಕ್ಷಣಾಧಿಕಾರಿಗಳಿಂದ ಪರೀಕ್ಷಿಸಿ ವಿತರಿಸಬೇಕು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುಬೇಕು. ಮೂಲ ಸೌಕರ್ಯಗಳಲ್ಲಿ ಯಾವುದೇ ಲೋಪ ಆಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ತಿಳಿಸಿದರು.
ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ರಾಜ್ಯ ಸಾರಿಗೆ ಸಂಸ್ಥೆಯ ವೇಗದೂತ ಬಸ್‌ಗಳು ದೇವಸ್ಥಾನದ ಬಳಿ ಕೋರಿಕೆ ನಿಲುಗಡೆಯನ್ನು ನೀಡುವಂತೆ ಹಾಗೂ ರಾಮನಗರ-ಚನ್ನಪಟ್ಟಣ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ತಹಸೀಲ್ದಾರ್ ಎಂ. ಜಿಶಾನ್ ಖಾನ್, ದೇವಸ್ಥಾನದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಘು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಂದಾರಗುಪ್ಪೆ ಚಂದ್ರು, ಸದಸ್ಯ ದಿಲೀಪ್, ಅರ್ಚಕರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.