ಜಿಲ್ಲೆ

ಬಿಸಿ ನಡೆಸುತ್ತಿದ್ದವನಿಗೆ 18,500 ರೂ. ದಂಡ

ಸೋಮನಾಥ ರೆಡ್ಡಿ

ನರಗುಂದ: ತಿಂಗಳಿಗೊಮ್ಮೆ ತುಂಬುವ ಬಿ.ಸಿ. ಹಣ, ಬಾಂಡ್ ಹಾಗೂ ಖಾಲಿ ಚೆಕ್‌ಗಳನ್ನು ಸಮಯಕ್ಕೆ ಸರಿಯಾಗಿ ಹಿಂತಿರುಗಿಸದೆ ಹಣ ತುಂಬಿದವರಿಗೇ ಅವಾಚ್ಯ ಶಬ್ದಗಳಿಂದ ನಿಂದಿಸಿದವನಿಗೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು 18,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪಟ್ಟಣದ ಸುನೀಲ ಬರಮೋಜಿ ಕಲಾಲ ಎಂಬಾತನಿಗೆ ದಂಡ ವಿಧಿಸಲಾಗಿದೆ.

ಸುನೀಲ ಕಲಾಲ ಬಿಸಿ ವ್ಯವಹಾರ ನಡೆಸುತ್ತಿದ್ದ. ಈತನ ಬಳಿ ನಗರದ ರಾಮಕೃಷ್ಣ ಪರಮೇಶ್ವರಪ್ಪ ಗೊಂಬಿ ಹಾಗೂ ಇತರರು 2016ರಲ್ಲಿ ಪ್ರತಿ ತಿಂಗಳು 3 ಸಾವಿರ ರೂ, ಮತ್ತೊಂದು ಬಿಸಿ ತಿಂಗಳಿಗೆ 60 ಸಾವಿರ ರೂ. ಕಟ್ಟುತ್ತಿದ್ದರು. ಇವೆರಡೂ ಬಿಸಿಯ ಎರಡ್ಮೂರು ಕಂತು ಬಾಕಿ ಇರುವಾಗ ಸುನೀಲ ಕಲಾಲನ ವರ್ತನೆಯಿಂದ ಆತಂಕಗೊಂಡು ಕಟ್ಟಿರುವ ಹಣ, ಶೂರಿಟಿಯಾಗಿ ಕೊಟ್ಟಿದ್ದ ಬಾಂಡ್ ಮತ್ತು ಖಾಲಿ ಚೆಕ್‌ಗಳನ್ನು ನೀಡುವಂತೆ ಕೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಸುನೀಲ ಹಣ ಕೊಟ್ಟವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ನರಗುಂದ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಪ್ರಕರಣ ದಾಖಲಿಸಿದ್ದರು.

ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಜೆಎಂಎಫ್‌ಸಿ ನ್ಯಾಯಾಧೀಶ ಜಿನ್ನಪ್ಪ ಚೌಗಲಾ ಅವರು ಅಪರಾಧಿ ಸುನೀಲ ಕಲಾಲಗೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಗತ್ತನಾಯಕ ಕಣವಿ ವಾದ ಮಂಡಿಸಿದ್ದರು.