ಜಿಲ್ಲೆ

ಹೊಳಲ್ಕೆರೆ ಹಳ್ಳಿಗಳಿಗೆ ಕುಡಿವ ನೀರು

ಚಿತ್ರದುರ್ಗ: ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ವಿ.ವಿ.ಸಾಗರದಿಂದ ಹೊಳಲ್ಕೆರೆ ತಾಲೂಕು ಜನ ವಸತಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ತಿಳಿಸಿದರು.
ವಿವಿ ಸಾಗರದ ಬಳಿ ಪ್ರಗತಿಯಲ್ಲಿರುವ ಜಾಕ್ವೆಲ್ ಕಾಮಗಾರಿ ಸ್ಥಳಕ್ಕೆ ಈಚೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಉಳಿಕೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿ, ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಕಾಮಗಾರಿಯ ಅನುಷ್ಠಾನದಲ್ಲಿ ಯಾವುದೇ ದೂರುಗಳು ಬರಬಾರದೆಂದು ಎಚ್ಚರಿಸಿದ ಅವರು, ಬಳಿಕ ಅಧಿಕಾರಿಗಳ ತಂಡ ಹೊಳಲ್ಕೆರೆ ತಾಲೂಕು ಆಲೇನಹಳ್ಳಿ ನೀರು ಶುದ್ಧೀಕರಣ ಘಟಕ ನಿರ್ಮಾಣ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿತು.
ಅಂದಾಜು 367 ಕೋಟಿ ರೂ. ವೆಚ್ಚದ ಈ ಯೋಜನೆಯಡಿ ಹೊಳಲ್ಕೆರೆ ತಾಲೂಕಿನ 215 ಜನ ವಸತಿ ಮತ್ತು ಹೊಳಲ್ಕೆರೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. 23 ಎಂಎಲ್‌ಡಿ ಶುದ್ಧ ಕುಡಿಯುವ ನೀರಿನ ಘಟಕ, 541 ಕಿ.ಮೀ.ಉದ್ದ ಪೈಪ್‌ಲೈನ್ ಅಳವಡಿಕೆ ಮತ್ತಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನೀರು ಪೂರೈಕೆ ಘಟಕದ ನಿರ್ಮಾಣ ಕಾರ‌್ಯ ಶೇ.75 ಪೂರ್ಣಗೊಂಡಿದೆ.
480 ಕಿ.ಮೀ. ಉದ್ದದ ಪೈಪ್ ಅಳವಡಿಸಲಾಗಿದೆ. ಎಲ್ಲ ಕಾಮಗಾರಿಗಳು ಪೂರ್ಣಗೊಂಡು 2024 ಜೂನ್ ಅಂತ್ಯದೊಳಗೆ ನೀರು ಪೂರೈಕೆಯಾಗಲಿದೆ ಎಂದು ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಬಸವನಗೌಡ ಮೇಟಿ ಪಾಟೀಲ ತಿಳಿಸಿದರು.
ಜಿಪಂ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ನೀಲಕಂಠಪ್ಪ, ಕೃಷ್ಣಮೂರ್ತಿ, ಜೆಇ ಶಿವಕುಮಾರ, ಗುತ್ತಿಗೆದಾರ ಕಂಪನಿ ಪ್ರಾಜೆಕ್ಟ್ ಮ್ಯಾನೇಜರ್ ಸೆಲ್ವಶೇಖರ್ ಮತ್ತಿತರರು ಇದ್ದರು.