ಜಿಲ್ಲೆ

ಭರವಸೆ ಮೂಡಿಸಿದ ಮೈಷುಗರ್ ಕಾರ್ಖಾನೆ: 12ದಿನದಲ್ಲಿ 18 ಸಾವಿರ ಮೆಟ್ರಿಕ್ ಟನ್ ಕಬ್ಬು ಕ್ರಷಿಂಗ್

ಮಂಡ್ಯ: ಜಿಲ್ಲೆಯ ಅಸ್ಮಿತೆಯಾಗಿರುವ ಮೈಷುಗರ್ ಕಾರ್ಖಾನೆಯಲ್ಲಿ ಕಳೆದ 12 ದಿನದ ಅವಧಿಯಲ್ಲಿ 18,135 ಮೆಟ್ರಿಕ್ ಟನ್ ಕಬ್ಬನ್ನು ನುರಿಸಲಾಗಿದೆ. ಅಂತೆಯೇ ಬಿಳಿ ಹರಳಿನ ಸಕ್ಕರೆ ಉತ್ಪಾದಿಸುವ ಮೂಲಕ ರೈತರಿಗೆ ಭರವಸೆ ಮೂಡಿಸಿದೆ.

ಜು.6ರಂದು ಸಂಜೆಯಿಂದ ಕಬ್ಬು ಅರೆಯುವಿಕೆಯನ್ನು ಕಾರ್ಖಾನೆಯಲ್ಲಿ ಪ್ರಾರಂಭಿಸಲಾಯಿತು. 17ರಂದು ಮುಂಜಾನೆವರೆಗೆ ಅಂದರೆ ಕೇವಲ 12 ದಿನಗಳಲ್ಲಿ 18,135 ಮೆಟ್ರಿಕ್ ಟನ್ ಕಬ್ಬನ್ನು ಅರೆದಿದೆ. ಆರಂಭದಲ್ಲಿ 500 ಟನ್ ಕಬ್ಬಿನೊಂದಿಗೆ ಆರಂಭಗೊಂಡ ಕ್ರಷಿಂಗ್ ಇದೀಗ 18 ಸಾವಿರ ಟನ್ ದಾಟಿದೆ. ಜು.13ರಂದು ಒಂದೇ ದಿನ ಗರಿಷ್ಠ 2,854 ಟನ್‌ವರೆಗೆ ಕಬ್ಬು ಅರೆದಿದ್ದು, ಇನ್ನು ಒಂದೆರಡು ದಿನಗಳಲ್ಲಿ 3 ಸಾವಿರ ಟನ್ ದಾಟುವ ನಿರೀಕ್ಷೆಯಿದೆ.

ಮಾತ್ರವಲ್ಲದೆ ಗುಣಮಟ್ಟದ ಸಕ್ಕರೆ ಉತ್ಪಾದನೆಯೊಂದಿಗೆ ಜನರ ಆತಂಕವನ್ನು ನಿವಾರಿಸುವ ಭರವಸೆ ಮೂಡಿಸಿದೆ. ಕಳೆದ ವರ್ಷ ಕ್ರಷಿಂಗ್ ನಡೆದ ಆರು ತಿಂಗಳ ಅವಧಿಯಲ್ಲಿ ಕೇವಲ 1.01 ಲಕ್ಷ ಟನ್ ಕಬ್ಬು ಅರೆದು, 35 ಸಾವಿರ ಕ್ವಿಂಟಾಲ್ ಸಕ್ಕರೆಯನ್ನಷ್ಟೇ ಉತ್ಪಾದಿಸಲಾಗಿತ್ತು. ಅಂತೆಯೇ ಹಿಂದಿನ ವರ್ಷಗಳಲ್ಲಿ ಶೇ.8ರಿಂದ 9ರಷ್ಟು ಸಕ್ಕರೆ ಇಳುವರಿ ಪಡೆಯುತ್ತಿದ್ದ ಕಾರ್ಖಾನೆಯಲ್ಲಿ 2022-23ನೇ ಸಾಲಿನಲ್ಲಿ ಶೇ.3.52ರಷ್ಟು ಇಳುವರಿ ಪಡೆಯಲಾಗಿತ್ತು. ಇದು ಕಾರ್ಖಾನೆಯ ಇತಿಹಾಸದಲ್ಲೇ ಕಡಿಮೆ ಪ್ರಮಾಣದ ಇಳುವರಿಯಾಗಿತ್ತು. ಆದರೆ, ಈ ವರ್ಷ ಕಾರ್ಖಾನೆಗಳು ಸಮರ್ಪಕವಾಗಿ ಕಬ್ಬು ಪೂರೈಕೆಯಾಗುತ್ತಿದ್ದು, ಯಾವುದೇ ದೊಡ್ಡ ಅಥವಾ ಗಂಭೀರ ತಾಂತ್ರಿಕ ಸಮಸ್ಯೆಗಳಿಲ್ಲದೆ ಯಂತ್ರೋಪಕರಣಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಪರಿಣಾಮ ಉತ್ಪಾದನೆ ಶುರುವಾದ ಮೊದಲ ದಿನದಿಂದಲೇ(ಜು.13) ಗುಣಮಟ್ಟದ ಸಕ್ಕರೆ ಉತ್ಪಾದನೆಯಾಗುತ್ತಿದೆ. ಪ್ರಸ್ತುತ ಎರಡು ಮಾದರಿಯ(ಸಣ್ಣ ಮತ್ತು ದಪ್ಪ) ಸಕ್ಕರೆ ಉತ್ಪಾದನೆಯಾಗುತ್ತಿದ್ದು, 50 ಕಿಲೋ ತೂಕದ ಮೂಟೆಗಳಲ್ಲಿ ಪ್ರತ್ಯೇಕವಾಗಿ ಪ್ಯಾಕಿಂಗ್ ಆಗುತ್ತಿವೆ.

ಸಣ್ಣ ಸಕ್ಕರೆಯು ಬಿಳಿ ಹರಳುಗಳಾಗಿದ್ದು, ದಪ್ಪ ಸಕ್ಕರೆಯು ಸ್ವಲ್ಪ ಕಂದು ಬಣ್ಣದ್ದಾಗಿದೆ. ಉತ್ಪಾದನೆ ಗುಣಮಟ್ಟ ಚೆನ್ನಾಗಿದೆ. ಈ ವರ್ಷ ಶೇ.8.5ರಿಂದ 9ರಷ್ಟು ಇಳುವರಿ ನಿರೀಕ್ಷಿಸಲಾಗಿದೆ. ನಿತ್ಯ ಸರಾಸರಿ 2500ಕ್ಕೂ ಹೆಚ್ಚು ಟನ್ ಕಬ್ಬು ಅರೆಯಲಾಗುತ್ತಿದೆ. ಇದರೊಂದಿಗೆ ಕಾರ್ಖಾನೆಯು ರೈತರಲ್ಲಿನ ಆತಂಕವನ್ನು ಒಂದು ಹಂತಕ್ಕೆ ನಿವಾರಿಸಿದೆ. ಮುಂದಿನ ದಿನದಲ್ಲಿ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನು ಕಾದು ನೋಡಬೇಕಿದೆ.

ಪ್ರಮುಖವಾಗಿ ಕಾರ್ಖಾನೆ ಕಾರ್ಯಾರಂಭ ಮಾಡಿರುವುದರಿಂದ ಇನ್ನೇನಿದ್ದರೂ ರೈತರ ಹೊಣೆಗಾರಿಕೆ ಹೆಚ್ಚಾಗಿದೆ. ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ಭವಿಷ್ಯದ ದೃಷ್ಟಿಯಿಂದ ರೈತರು ಮೈಷುಗರ್‌ಗೆ ಕಬ್ಬು ಪೂರೈಸಬೇಕಿದೆ. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ 1500ಕ್ಕೂ ಹೆಚ್ಚು ಜನ ಕಾರ್ಮಿಕರು ಮಂಡ್ಯಗೆ ಬಂದಿದ್ದು, ಅವರನ್ನು ಕಾರ್ಖಾನೆ ವ್ಯಾಪ್ತಿಯ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ. ರೈತರು ತಾವು ಬೆಳೆದಿರುವ ಕಬ್ಬನ್ನು ಕಟಾವು ಮಾಡಿಸಿ ಕಾರ್ಖಾನೆಗೆ ಪೂರೈಸಬೇಕಿದೆ. ಇದರೊಂದಿಗೆ ಕಾರ್ಖಾನೆ ಉಳಿಸಬೇಕೆನ್ನುವ ಹೋರಾಟಕ್ಕೆ ಕೈಜೋಡಿಸಬೇಕಿದೆ.

ತಾಂತ್ರಿಕ ದೋಷದಿಂದ ಸ್ಥಗಿತ: ಮೈಷುಗರ್‌ನಲ್ಲಿ ಜು.15ರಂದು ಕಬ್ಬು ಅರೆಯುವಿಕೆ ಸ್ಥಗಿತಗೊಂಡಿತ್ತು. ಆದರೆ, ಕಾರ್ಖಾನೆಯೊಳಗಿನ ಯಂತ್ರೋಪಕರಣಗಳ ಸಮಸ್ಯೆಯಿಂದಲ್ಲ. ಬದಲಿಗೆ ಕಾರ್ಖಾನೆಗೆ ವಿದ್ಯುತ್ ಪೂರೈಕೆಯಾಗುತ್ತಿದ್ದ ಸೆಸ್ಕ್‌ನ ಪವರ್‌ಗ್ರೀಡ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ಕಾರ್ಖಾನೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಜು.15ರಂದು ಮಧ್ಯರಾತ್ರಿ 12 ಗಂಟೆಯಿಂದ ಜು.16ರಂದು ಮಧ್ಯಾಹ್ನ 3 ಗಂಟೆವರೆಗೆ ನಿಂತಿದ್ದ ಕಬ್ಬು ಅರೆಯುವಿಕೆಯು ಸಂಜೆ 4 ಗಂಟೆಯಿಂದಲೇ ಪುನಾರಂಭಗೊಂಡಿದೆ. 16ರಂದು ಸಂಜೆಯಿಂದ ಜು.17ರಂದು ಬೆಳಗ್ಗೆ 6 ಗಂಟೆವರೆಗೆ 1,622 ಟನ್ ಕಬ್ಬು ಅರೆಯಲಾಗಿದೆ.

ಕಾರ್ಖಾನೆಗೆ ರೈತರು ಕಬ್ಬು ಸರಬರಾಜು ಮಾಡುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಲಾರಿಗಳು, ಎತ್ತಿನಗಾಡಿಗಳು ಮತ್ತು ಟ್ರ್ಯಾಕ್ಟರ್ ಗಳು ಕಬ್ಬು ತುಂಬಿಕೊಂಡು ಕಾರ್ಖಾನೆ ಯಾರ್ಡ್‌ನಲ್ಲಿ ಜಮಾವಣೆಗೊಂಡಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೈಷುಗರ್‌ನಲ್ಲಿ ಕಬ್ಬು ಅರೆಯುವಿಕೆ ಕಾರ್ಯ ಸುಧಾರಣೆ ಕಂಡಿದೆ. ಪ್ರಮುಖವಾಗಿ ಕಾರ್ಖಾನೆಯಲ್ಲಿ ಆಗಾಗ ರಿಪೇರಿಗೆ ಬರುವ ಯಂತ್ರೋಪಕರಣಗಳ ಬದಲಾವಣೆ ಮಾಡಬೇಕಿದೆ. ಸ್ಟೀಮ್ ಪೈಪ್‌ಲೈನ್ ಸೋರಿಕೆಯಾಗುತ್ತಿದ್ದು, ಅದನ್ನೂ ಬದಲಾವಣೆ ಮಾಡುವ ಅಗತ್ಯವಿದೆ. ತುಕ್ಕು ಹಿಡಿದಿರುವ ಯಂತ್ರಗಳನ್ನು ಬದಲಿಸಿ ಹೊಸ ಯಂತ್ರಗಳನ್ನು ಜೋಡಣೆ ಮಾಡಬೇಕಿದೆ. ರಾಜ್ಯ ಸರ್ಕಾರ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡಿದರೆ ಅವುಗಳ ಬದಲಾವಣೆಗೆ ಹೆಚ್ಚಿನ ಸಹಕಾರಿಯಾಗಲಿದೆ.