ತುಮಕೂರು: ಜಿಲ್ಲೆಯಲ್ಲಿ ಬುಧವಾರ ದಾಖಲೆಯ 1804 ಜನರಲ್ಲಿ ಕರೊನಾ ಸೋಂಕು ದೃಢವಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9505ಕ್ಕೇರಿದೆ. ಜಿಲ್ಲಾಸ್ಪತ್ರೆ ತುರ್ತು ನಿಗಾಘಟಕದಲ್ಲಿ 9 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೊರಟಗೆರೆ ತಾಲೂಕಿನ 60 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದು, ಈವರೆಗೆ ಒಟ್ಟು ಸಾವಿನ ಸಂಖ್ಯೆ 1147ಕ್ಕೇರಿದೆ. ಬಹುತೇಕ ಸೋಂಕಿತರಿಗೆ ಸೌಮ್ಯ ಲಕ್ಷಣಗಳಷ್ಟೇ ಕಾಣಿಸಿಕೊಂಡಿದ್ದು ಆಸ್ಪತ್ರೆಗಳ ಅವಶ್ಯಕತೆ ಕಂಡು ಬಂದಿಲ್ಲ. ಜಿಲ್ಲೆಯ ಇತಿಹಾಸದಲ್ಲಿಯೇ ಇಷ್ಟೊಂದು ಸಂಖ್ಯೆಯ ಸೋಂಕು ಒಂದೇ ದಿನ ಪತ್ತೆಯಾಗಿಲ್ಲ, ನೂರು ಜನರನ್ನು ಪರೀಕ್ಷೆಗೆ ಒಳಪಡಿಸಿದರೆ 25 ಜನರಿಗೆ ಸೋಂಕು ದೃಢವಾಗುತ್ತಿದ್ದು, ಮುಂದಿನ ಒಂದೆರಡು ವಾರದಲ್ಲಿ ಮತ್ತಷ್ಟು ಜನರಲ್ಲಿ ಸೋಂಕು ಹಬ್ಬುವ ಆತಂಕವಿದೆ.
ಬುಧವಾರ ಚಿಕ್ಕನಾಯಕನಹಳ್ಳಿ 98, ಗುಬ್ಬಿ 75, ಕೊರಟಗೆರೆ 135, ಕುಣಿಗಲ್ 62, ಮಧುಗಿರಿ 184, ಪಾವಗಡ 168, ಶಿರಾ 166, ತಿಪಟೂರು 195, ತುಮಕೂರು 651 ಹಾಗೂ ತುರುವೇಕೆರೆಯಲ್ಲಿ 70 ಒಟ್ಟು 1804 ಜನರಿಗೆ ಸೋಂಕು ಕಾಣಿಸಿದೆ.
ವಿವಿಧ ಆಸ್ಪತ್ರೆಗಳಿಂದ ಗುಣಮುಖರಾದ 258 ಜನರ ವರದಿ ನೆಗೆಟಿವ್ ಬಂದಿದ್ದು ಎಲ್ಲರಿಗೂ ಮನೆಯಲ್ಲಿಯೇ ಏಕಾಂಗಿಯಾಗಿ ಚಿಕಿತ್ಸೆ ಪಡೆಯಲು ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸೂಕ್ತ ನಿಗಾವಹಿಸಿದೆ.
ಹಳ್ಳಿಗಳಲ್ಲಿ ಹೆಚ್ಚಾಗಬೇಕು ಪರೀಕ್ಷೆ: ಗ್ರಾಮೀಣ ಭಾಗದ ಬಹುತೇಕ ಮನೆಗಳಲ್ಲಿ ಮೈ, ಕೈನೋವು, ಶೀತ ಜ್ವರದಿಂದ ಬಳಲುವವರು ಕಾಣಸಿಗುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆ ಹಾಗೂ ವ್ಯಾಕ್ಸಿನ್‌ಗಾಗಿ ಆಸ್ಪತ್ರೆಗೆ ಬರುವವರನ್ನು ಮಾತ್ರ ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹಳ್ಳಿಗಳಲ್ಲಿಯೂ ಸಾಮೂಹಿಕವಾಗಿ ಪರೀಕ್ಷೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದೆ.
ಕರೊನಾ ಸೋಂಕಿತ 37 ಶಾಲೆಗಳಿಗೆ ರಜೆ!: ತುಮಕೂರು ಶೈಕ್ಷಣಿಕ ಜಿಲ್ಲೆಯ 32 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 5 ಶಾಲೆಗಳ ಒಟ್ಟು 850 ಮಕ್ಕಳಿಗೆ ಕರೊನಾ ವಕ್ಕರಿಸಿದೆ. ಸೋಂಕು ಕಾಣಿಸಿಕೊಂಡ ಶಾಲೆಗಳಲ್ಲಿ ಜಿಲ್ಲಾಡಳಿತದ ಸೂಚನೆಯಂತೆ 7 ದಿನಗಳು ರಜೆ ಘೋಷಿಸಲಾಗಿದ್ದು ಎಲ್ಲ ಮಕ್ಕಳಿಗೂ ಜಾಗ್ರತೆ ವಹಿಸಲು ಸೂಚಿಸಲಾಗಿದೆ. ಸಾಕಷ್ಟು ಖಾಸಗಿ ಶಾಲೆಗಳಲ್ಲಿ ಸೋಂಕು ಕಾಣಿಸಿಕೊಂಡಿದರೂ ಮುಚ್ಚಿಟ್ಟು ಶಾಲೆಗಳನ್ನು ನಡೆಸುತ್ತಿರುವ ಬಗ್ಗೆಯೂ ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.