ಚನ್ನರಾಯಪಟ್ಟಣ: ಬಗರ್ ಹುಕುಂ ಸಾಗುವಳಿ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದವರ ಪೈಕಿ ಅರ್ಹ ಫಲಾನುಭವಿಗಳನ್ನು ಗುರುತಿಸಿ 80 ರೈತರಿಗೆ 80.17 ಎಕರೆ ಭೂಮಿಯ ಸಾಗುವಳಿ ಚೀಟಿ ನೀಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ಸೋಮವಾರ ಅಯೋಜಿಸಿದ ಕಂದಾಯ ಹಾಗೂ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಆದೇಶ ಪ್ರತಿಯನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
ತಾಲೂಕಿನಲ್ಲಿ ಬಗರ್ ಹುಕುಂ ಕಮಿಟಿಯು ಇದುವರೆವಿಗೂ 180 ಮಂದಿ ಫಲಾನುಭವಿಗಳನ್ನು ಗುರ್ತಿಸಿ ಸಾಗುವಳಿ ಚೀಟಿ ನೀಡಿದೆ. ಇಂದಿನ ಕಂದಾಯ ಆದಾಲತ್‌ನಲ್ಲಿ 80 ಮಂದಿಗೆ ಆದೇಶ ಪ್ರತಿ ನೀಡಲಾಗುತ್ತಿದೆ ಎಂದರು.
ಬಗರ್‌ಹುಕುಂ ಸಾಗುವಳಿ ಮಂಜೂರಾತಿಗಾಗಿ 4 ಸಾವಿರ ರೈತರು ಅರ್ಜಿ ಸಲ್ಲಿಸಿದ್ದಾರೆ. ಕಾನೂನಿನಲ್ಲಿ ತೊಡಕಿದ್ದು ಫಾರಂ. 50 ಹಾಗೂ 53 ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಅವಕಾಶವಿಲ್ಲವೆಂದು ಸರ್ಕಾರ 57 ರಡಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಆದರಡಿ ಗ್ರಾಮದಲ್ಲಿ ಜಾನುವಾರಗಳ ಸಂಖ್ಯೆ ಆಧರಿಸಿ ಗೋಮಾಳ ಕಾಯ್ದಿರಿಸುವಂತೆ ತಿಳಿಸಿದೆ ಎಂದು ತಿಳಿಸಿದರು.
ಇದರಿಂದ ಭೂಮಿ ಉಳುಮೆ ಮಾಡುವ ರೈತನಿಗೆ ಮಂಜೂರಾತಿಗೆ ಅವಕಾಶವಿರುವುದಿಲ್ಲ. ಈ ಬಗ್ಗೆ ಸರ್ಕಾರ ಆದೇಶವನ್ನು ಮರು ಪರಿಶೀಲಿಸುವ ಅಗತ್ಯತೆ ಇದೆ ಈ ಬಗ್ಗೆ ಸದನದಲ್ಲಿಯೂ ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನಲ್ಲಿ ಕೆರೆ ಕಟ್ಟೆಗಳು ಭರ್ತಿಯಾಗಿದ್ದು ಗುಣಮಟ್ಟದ ವಿದ್ಯುತ್‌ನ್ನು ನಿರಂತರ 7 ಗಂಟೆ ಕಾಲ ನೀಡಬೇಕೆಂದು ಸೆಸ್ಕ್ ಅಧಿಕಾರಿಗಳಿಗೆ ತಿಳಿಸಿದ ಅವರು, ಈ ನಿಟ್ಟಿನಲ್ಲಿ ಯಾಚೇನಹಳ್ಳಿಯಲ್ಲಿರುವ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದೊಂದಿಗೆ, ಕಲ್ಕೇರೆ ಬಳಿ ಇನ್ನೊಂದು 220 ಕೆವಿ ಸ್ವೀಕರಣಾ ಕೇಂದ್ರ ಆರಂಭ ಮಾಡಲಾಗುವುದು. ಇನ್ನೂ 100 ಕೆವಿಎ ಟ್ರಾನ್ಸ್‌ಫಾರ್ಮರ್‌ಗಳ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಸೆಸ್ಕ್ ಎಂಡಿ ಯವರೊಂದಿಗೆ ಚರ್ಚಿಸಿ ಶ್ರೀಘ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಮಸ್ಯೆ ಹೊತ್ತು ತಮ್ಮ ನಿವಾಸಕ್ಕೆ ಬರುವವರಿಗೆ ಸ್ಥಳದಲ್ಲೆ ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸಭೆ ಅಯೋಜಿಸಲಾಗಿದೆ. ತಾಲೂಕು ಕಛೇರಿ ಮತ್ತು ಸವೇ ಇಲಾಖೆಯಲ್ಲಿನ ಸಮಸ್ಯೆಗಳನ್ನು ಮುಕ್ತವಾಗಿ ಪರಿಹಾರ ಕೊಂಡುಕೊಳ್ಳಲು ಕಂದಾಯ ಆದಾಲತ್ ನೆರವಾಗಿದೆ ಎಂದರು.
ಕಳೆದ ಆಕ್ಟೋಬರ್‌ನಿಂದ 539 ಪೌತಿ ಖಾತೆ, 394 ಪಹಣಿ ತಿದ್ದುಪಡಿ ಪ್ರಕರಣಗಳು, 772 ವೃದ್ಯಾಪ್ಯ ವೇತನ, 623ಮಂದಿಗೆ ಮನೆಹಾನಿ ಪರಿಹಾರ, 73ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಹಾಗೂ 134 ಮಂದಿಗೆ ಗ್ರಾಮ ಹಕ್ಕುಪತ್ರ ಆದೇಶ ಪ್ರತಿ ವಿತರಣಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ಬಿ.ಎಂ.ಗೋವಿಂದ್‌ರಾಜ್ ಮಾತನಾಡಿ, ಪೌತಿ ಹಾಗೂ ಪಹಣಿ ತಿದ್ದುಪಡಿ ಸೇರಿ ಹತ್ತಾರು ಕೆಲಸಗಳಿಗೆ ಕಂದಾಯ ಇಲಾಖೆಗೆ ಆಗಮಿಸಿ ಸಮಯ ವ್ಯರ್ಥಕ್ಕೆ ಅವಕಾಶವಾಗಬಾರದೆಂದು ಸ್ಥಳದಲ್ಲೆ ಸಮಸ್ಯೆ ಆಲಿಸಿ ಪರಿಹಾರ ಕೊಂಡುಕೊಳ್ಳುವ ನಿಟ್ಟಿನಲ್ಲಿ ಕಂದಾಯ ಆದಾಲತ್ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ರೇಖಾಅನಿಲ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಲಕ್ಷ್ಮಿ, ಸ್ಥಾಯಿಸಮಿತಿ ಅಧ್ಯಕ್ಷೆ ಬನಶಂಕರಿ, ಬಗರ್‌ಹುಕುಂ ಕಮಿಟಿ ಸದಸ್ಯರಾದ ರವಿಕುಮಾರ್, ಛಾಯಾ ಕೃಷ್ಣ, ಸಿಪಿಐ ವಸಂತ್‌ಕುಮಾರ್, ಎಡಿಎಲ್‌ಆರ್ ಪ್ರಸಾದ್, ಕಸಬಾ ಆರ್‌ಐ ಮಂಜುನಾಥ್ ಹಾಗೂ ಇತರರು ಇದ್ದರು.