ಜಿಲ್ಲೆ

18 ರಂದು ತಂಬಾಕು ಮಾರುಕಟ್ಟೆ ಬಂದ್

ಪ್ರತಿಭಟನೆಗೆ ತಾಲೂಕು ರೈತ ಸಂಘ ನಿರ್ಧಾರ

ಅರಕಲಗೂಡು: ತಂಬಾಕು ಮಾರುಕಟ್ಟೆ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಗುಣಮಟ್ಟದ ಉತ್ಪನ್ನಕ್ಕೆ ಉತ್ತಮ ದರ ದೊರೆಯುತ್ತಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ ನ. 18 ರಂದು ತಂಬಾಕು ಮಾರುಕಟ್ಟೆ ಬಂದ್ ಮಾಡಿಸಲಾಗುವುದು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಸ್. ವಿ. ಯೋಗಣ್ಣ ಹೇಳಿದರು.

ಉತ್ತಮ ದರ್ಜೆ ಹೊಗೆಸೊಪ್ಪಿಗೆ ಆಂಧ್ರದಲ್ಲಿ ಕೆ.ಜಿ.ಗೆ ರೂ. 400 ನೀಡುತ್ತಿದ್ದಾರೆ. ಇಲ್ಲಿ 280 ರೂ. ಇದೆ. ಈ ವಾರ ದರ 260ಕ್ಕೆ ಕುಸಿದಿದೆ. ಮಾರುಕಟ್ಟೆ ಪ್ರಾರಂಭವಾಗಿ ತಿಂಗಳು ಕಳೆದರೂ ಕೆಳದರ್ಜೆ ತಂಬಾಕು, ಕಪ್ಪು ಹೊಗೆಸೊಪ್ಪು (ಬಿಪಿಎಲ್ ) ಖರೀದಿ ನಡೆಯುತ್ತಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವಿದೇಶಿ ವಿನಿಮಯ ದೊರೆಯತ್ತಿದೆ: ರಾಜ್ಯದ 50 ಸಾವಿರ ತಂಬಾಕು ಬೆಳೆಗಾರರು ಕಳೆದ 40 ವರ್ಷದಿಂದ 100 ಮಿಲಿಯನ್ ಗುಣಮಟ್ಟದ ತಂಬಾಕು ಬೆಳೆಯುತ್ತಿದ್ದಾರೆ. ವಿದೇಶಗಳಿಗೆ ರಫ್ತಾಗುತ್ತಿರುವ ಈ ಉತ್ಪನ್ನದಿಂದ ಕೇಂದ್ರ ಸರ್ಕಾರಕ್ಕೆ ರೂ. 45 ಸಾವಿರ ಕೋಟಿ ವಿದೇಶಿ ವಿನಿಮಯ ದೊರೆಯತ್ತಿದೆ. ಆದರೆ ನಮ್ಮಲ್ಲೇ ಉತ್ತಮ ದರ ನೀಡದ ಕಾರಣ ಬೆಳೆಗಾರರು ಬೀದಿಗೆ ಬೀಳುವಂತಾಗಿದೆ. ಈ ಕುರಿತು ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ಚಕಾರ ಎತ್ತುತ್ತಿಲ್ಲ ಎಂದು ದೂರಿದರು. ತಂಬಾಕು ಬೆಳೆಗಾರರಿಗೆ ಜಿಎಸ್‌ಟಿ ಮತ್ತು ಎಸ್‌ಟಿಎಸ್‌ಸಿ ತೆರಿಗೆ ಹೊರೆ ಹೇರಲಾಗುತ್ತಿದೆ. ಕ್ಷೇಮಾಭಿವೃದ್ಧಿ ನಿಧಿಗೆ ಬೆಳೆಗಾರರ ವಂತಿಗೆ ನೀಡುತ್ತಿದ್ದರೂ ಬೆಳೆಗಾರ ಮೃತಪಟ್ಟಾಗ ಕೇವಲ ರೂ. 50 ಸಾವಿರ ಮಾತ್ರ ನೀಡಲಾಗುತ್ತಿದೆ, ರೈತರ ಬ್ಯಾರನ್ ಮನೆಗಳು ಸುಟ್ಟುಹೋದರೆ ಸಾಮಾನ್ಯವಾಗಿ ರೂ. 2 ಲಕ್ಷ ನಷ್ಟ ಉಂಟಾಗುತ್ತದೆ, ಆದರೆ ನೀಡುವ ಪರಿಹಾರ ಕೇವಲ ರೂ 30 ಸಾವಿರ ಮಾತ್ರ. ರಾಜ್ಯದಲ್ಲಿ ಸುಮಾರು 25 ಸಾವಿರ ಅನಧಿಕೃತ ಬೆಳೆಗಾರರು ಇದ್ದಾರೆ. ಇವರಿಗೂ ಅಧಿಕೃತ ಬೆಳೆಗಾರರಂತೆ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ರೈತರ ಸಮಸ್ಯೆಗಳ ಕುರಿತು ಸಂಸದ ಶ್ರೇಯಸ್ ಪಟೇಲ್ ಗಮನ ಹರಿಸಿ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕೇಂದ್ರದ ಗಮನ ಸೆಳೆಯಬೇಕು, ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಎಸ್. ವಿ. ಯೋಗಣ್ಣ ಒತ್ತಾಯಿಸಿದರು.

ಸಂಸದರು ಸ್ಥಳಕ್ಕೆ ಬರಬೇಕು: ಸೂಕ್ತ ಬೆಲೆ, ಮಾರಾಟ ವ್ಯವಸ್ಥೆ ಹಾಗೂ ಬೆಳೆಗಾರರ ಹಿತರಕ್ಷಣೆಗೆ ಒತ್ತಾಯಿಸಿ ರೈತ ಸಂಘ ನ. 18 ರಂದು ಮಾರುಕಟ್ಟೆ ಬಂದ್‌ಗೆ ಕರೆ ನೀಡಿದೆ. ಸಂಸದರು ಸ್ಥಳಕ್ಕೆ ಬಂದು ರೈತರ ಸಮಸ್ಯೆ ಅಲಿಸಿ ಆಹವಾಲು ಸ್ವೀಕರಿಸುವಂತೆ ಯೋಗಣ್ಣ ಆಗ್ರಹಿಸಿದರು.

ಕ್ರಮಕ್ಕೆ ಆಗ್ರಹ: ಪಟ್ಟಣದ ಸರ್ವೆ ನಂ. 120 ರಲ್ಲಿ 4.10 ಎಕರೆ ಸರ್ಕಾರಿ ಜಾಗವನ್ನು ಪಹಣಿಯಲ್ಲಿ ವಕ್ಫ್ ಹೆಸರಿಗೆ ನಮೂದಿಸಿರುವ ಕ್ರಮವನ್ನು ರೈತ ಸಂಘ ತೀವ್ರವಾಗಿ ಖಂಡಿಸಿದೆ. ಕಂದಾಯ ಇಲಾಖೆ ಕೂಡಲೇ ಇದನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕು. ಈ ಬಗ್ಗೆ ನ. 15ರಂದು ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಬಂದ್ ಮಾಡಿ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಸ್. ವಿ. ಯೋಗಣ್ಣ ಎಚ್ಚರಿಸಿದರು. ರೈತ ಸಂಘದ ಗೌರವಾಧ್ಯಕ್ಷ ಭುವನೇಶ್, ಜಿಲ್ಲಾ ಉಪಾಧ್ಯಕ್ಷ ಎಚ್.ಸಿ. ಜಗದೀಶ್, ಮುಖಂಡರಾದ ಮುಗಳೂರು ಕೃಷ್ಣೇಗೌಡ, ಮಂಜೇಗೌಡ, ವೇದಾನಂದ ಗೋಷ್ಠಿಯಲ್ಲಿದ್ದರು.