ತುಮಕೂರು: ಜಿಲ್ಲೆಯಲ್ಲಿ ಕರೊನಾ ಸ್ಫೋಟಗೊಳ್ಳುತ್ತಿರುವ ಬೆನ್ನಲ್ಲೇ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜೂ.26ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರು ನಿವಾಸಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದು, ಕೋವಿಡ್ ಮಾರ್ಗಸೂಚಿಯಂತೆ ಮೃತ ದೇಹ ಹಾಗೂ ದಾಖಲೆಗಳನ್ನು ಬೆಂಗಳೂರಿಗೆ ವರ್ಗಾಹಿಸಲಾಗಿದೆ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ತಿಳಿಸಿದರು.
ಭಾನುವಾರ ಜಿಲ್ಲೆಯಲ್ಲಿ 18 ಕರೊನಾ ಪ್ರಕರಣ ದಾಖಲಾಗಿದ್ದು, ತುಮಕೂರು 7, ಪಾವಗಡ 5, ಗುಬ್ಬಿ 1, ಕೊರಟಗೆರೆ 2, ಮಧುಗಿರಿ 2 ಹಾಗೂ ತಿಪಟೂರು ನಗರದಲ್ಲಿ 1 ಪ್ರಕರಣ ದಾಖಲಾಗಿದೆ. ಕಂಟೇನ್ಮೆಂಟ್ ವಲಯದ ಒಬ್ಬ ಮಹಿಳೆ, ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಶಾಂತಿನಗರದ 58 ವರ್ಷದ ಪುರುಷ, ಕ್ಯಾತಸಂದ್ರದಲ್ಲಿ 34 ವರ್ಷದ ಪುರುಷ, ರ‌್ಯಾಂಡಮ್ ಸ್ಯಾಂಪಲ್‌ನಲ್ಲಿ ಬಡ್ಡಿಹಳ್ಳಿಯಲ್ಲಿ 76 ಹಾಗೂ 63 ವರ್ಷದ ಇಬ್ಬರು ವೃದ್ಧರು ಹಾಗೂ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುವ 42 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢವಾಗಿದೆ. ಹೊನ್ನುಡಿಕೆಯ 54 ವರ್ಷದ ಪುರುಷ ಹಾಗೂ ಬೈರಸಂದ್ರದ 45 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಪ್ರವಾಸದ ಹಿನ್ನೆಲೆ ಪತ್ತೆ ಮಾಡಲಾಗುತ್ತಿದೆ.
ಗುಬ್ಬಿಯಲ್ಲಿ ಟ್ರಕ್ ಚಾಲಕ ಬೆಂಗಳೂರು ಪ್ರವಾಸದ ಹಿನ್ನೆಲೆಯ ವ್ಯಕ್ತಿ, ತಿಪಟೂರಿನಲ್ಲಿ ಪಾಸಿಟಿವ್ ಬಂದಿರುವ ವ್ಯಕ್ತಿಯ ಸಂಪರ್ಕದಲ್ಲಿದ್ದ ಮಹಿಳೆಗೆ ಸೋಂಕು ತಗುಲಿದೆ. ಪಾವಗಡದಲ್ಲಿ ದಾಖಲಾಗಿರುವ 5 ಪ್ರಕರಣಗಳಲ್ಲಿ ಯಾರಿಗೂ ಪ್ರಯಾಣದ ಹಿನ್ನೆಲೆ ಇಲ್ಲ, ಎಲ್ಲರೂ ಸ್ಥಳೀಯರೇ ಆಗಿದ್ದಾರೆ. ಕೆಮ್ಮು, ನೆಗಡಿಯ ಲಕ್ಷಣದ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷೆ ನಡೆಸಲಾಗಿತ್ತು.
ಮಧುಗಿರಿಯಲ್ಲಿ ಚಿಕ್ಕಬಳ್ಳಾಪುರ ಪ್ರವಾಸದ ಹಿನ್ನೆಲೆಯ 16 ವರ್ಷದ ಬಾಲಕ ಹಾಗೂ ಬಡವನಹಳ್ಳಿಯ 63 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಹಾಗೂ ದ್ವೀತೀಯ ಸಂಪರ್ಕದಲ್ಲಿದ್ದ 12 ಜನರನ್ನು ಕ್ವಾರಂಟೇನ್ ಮಾಡಲಾಗಿದೆ.
ತಿಪಟೂರು ಚಾಮುಂಡೇಶ್ವರಿ ಬಡಾವಣೆಯಲ್ಲಿ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ 38 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಕೊರಟಗೆರೆ ತಾಲೂಕು ತೋವಿನಕೆರೆ ಸಮೀಪದ ದೇವರಹಳ್ಳಿಯ 9 ವರ್ಷದ ಬಾಲಕ ಹಾಗೂ ಶಕುನಿ ತಮ್ಮನಿಹಳ್ಳಿ ತಾಂಡಾದ 10 ವರ್ಷದ ಬಾಲಕಿ, ಗುಬ್ಬಿ ತಾಲೂಕು ಎನ್.ಹೊಸಹಳ್ಳಿಯಲ್ಲಿ 35 ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ಸಮುದಾಯಕ್ಕೆ ಸೋಂಕು: ಪಾವಗಡದಲ್ಲಿ ಸಮುದಾಯಕ್ಕೆ ಕರೊನಾ ಸೋಂಕು ಹರಡಿರುವ ಭಯ ಜಿಲ್ಲಾಡಳಿತಕ್ಕೆ ಕಾಡಲಾರಂಭಿಸಿದೆ. ಭಾನುವಾರ ಪತ್ತೆಯಾಗಿರುವ 5 ಪ್ರಕರಣಗಳೆಲ್ಲೆವೂ ಯಾವುದೇ ಪ್ರಯಾಣದ ಹಿನ್ನೆಲೆ ಹೊಂದಿರದ ಸ್ಥಳೀಯರೇ ಆಗಿದ್ದಾರೆ. ಭೂಪೂರು ತಾಂಡದ 40 ವರ್ಷದ ಪುರುಷ, ಕಡಮಲಕುಂಟೆ 34 ವರ್ಷದ ಯುವಕ, ಪಾವಗಡ 45 ವರ್ಷದ ಪುರುಷ, 36 ವರ್ಷದ ಪುರುಷ, ಕೆಂಚಗಾನಹಳ್ಳಿಯ 32 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದೆ.
ಯಾರೂ ಭಯ ಪಡೆದೆ ಕೆಮ್ಮು, ನೆಗಡಿ ಇದ್ದವರು ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷೆ ನಡೆಸಬೇಕು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಗಂಟಲು ದ್ರವದ ಮಾದರಿ ನೀಡಬೇಕು, ಡಾ.ನಾಗೇಂದ್ರಪ್ಪ ಜಿಲ್ಲಾ ಆರೋಗ್ಯಾಧಿಕಾರಿ