ಪುರುಷೋತ್ತಮ ಪೆರ್ಲ ಕಾಸರಗೋಡು
ಪೆರ್ಲ ಸನಿಹದ ಪೆಲ್ತಾಜೆ ನಿವಾಸಿ, ಉರಗತಜ್ಞ ಮುರಳಿಮಾಧವ ತಾನು ರಕ್ಷಿಸಿದ ಹೆಬ್ಬಾವಿನ 18 ಮೊಟ್ಟೆಗಳನ್ನು ಕಾವು ಕೊಟ್ಟು ಮರಿ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಪಡ್ರೆಯಲ್ಲಿ ಮನೆಯೊಂದರ ಸಣ್ಣ ಬಿಲದಲ್ಲಿ 18 ಮೊಟ್ಟೆಗಳೊಂದಿಗೆ ಹೆಬ್ಬಾವು ಕಂಡುಬಂದಿತ್ತು. ಅರಣ್ಯ ಇಲಾಖೆಗೆ ಮನೆಯವರು ಮಾಹಿತಿ ನೀಡಿ ಸ್ಥಳಾಂತರಿಸುವಂತೆ ಕೇಳಿಕೊಂಡಿದ್ದರು. ಇಲಾಖೆ ಮುರಳೀಮಾಧವ ಅವರನ್ನು ಸಂಪರ್ಕಿಸಿ ಸಹಾಯ ಕೇಳಿತ್ತು.
ಮೇ 13ರಂದು ಹೆಬ್ಬಾವಿನ ಮೊಟ್ಟೆಗಳನ್ನು ಮನೆಗೆ ಕೊಂಡೊಯ್ದು, ಪ್ರತ್ಯೇಕ ಪ್ಲಾಸ್ಟಿಕ್ ಬ್ಯಾರಲ್‌ನಲ್ಲಿ ಮರಳು ತುಂಬಿ, ಇದಕ್ಕೆ ಸ್ವಲ್ಪ ನೀರು ಹಾಯಿಸಿ ಮೇಲೆ ಬೈಹುಲ್ಲು ಹರಡಿ ಕೃತಕ ಕಾವಿಗೆ ವ್ಯವಸ್ಥೆ ಮಾಡಿದ್ದರು. ಬ್ಯಾರಲ್‌ಗೆ ಇರುವೆ ಸಂಚರಿಸದಂತೆ ಸುತ್ತು ನೀರು ತುಂಬಿ ಅದರ ಮಧ್ಯೆ ಬ್ಯಾರಲ್ ಇರಿಸಿದ್ದರು. ನಿರಂತರ ನಿರೀಕ್ಷಣೆಯೊಂದಿಗೆ ಜೂನ್ 6ಕ್ಕೆ ಎಲ್ಲ 18ಮೊಟ್ಟೆಗಳು ಒಡೆದು ಇದರಿಂದ ಆರೋಗ್ಯವಂತ ಹೆಬ್ಬಾವಿನ ಮರಿಗಳು ಹೊರಬಂದಿವೆ.
ಜಿಲ್ಲಾ ಅರಣ್ಯಾಧಿಕಾರಿ ಅಶ್ರಫ್ ಹಾಗೂ ಇತರ ಅಧಿಕಾರಿಗಳ ಮುತುವರ್ಜಿಯಲ್ಲಿ ಈ ಪ್ರಕ್ರಿಯೆ ನಡೆದಿದೆ. ಬೀಟ್ ಫಾರೆಸ್ಟ್ ಅಧಿಕಾರಿ ವಿಘ್ನೇಶ್, ಅರುಣ್ ಹಾಗೂ ಪರಿಸರ ಪ್ರೇಮಿ ರಾಜು ಕಿದೂರು ಸಹಕಾರಗಳೊಂದಿಗೆ ಎಲ್ಲ 18 ಮರಿಗಳನ್ನು ವಾಣೀನಗರದ ರಕ್ಷಿತಾರಣ್ಯದಲ್ಲಿ ಬಿಡಲಾಯಿತು.
ಹೆಬ್ಬಾವು, ಕಾಳಿಂಗ ಸರ್ಪಗಳು ಮೊಟ್ಟೆಗಳಿಗೆ ಕಾವು ನೀಡಿ ಮರಿ ಹೊರಬರುತ್ತಿದ್ದಂತೆ ತನ್ನಷ್ಟಕ್ಕೆ ತೆರಳುತ್ತವೆ. ಮಾನವರು ಅಥವಾ ಪ್ರಾಣಿಗಳಿಂದ ಸಮಸ್ಯೆ ಉಂಟಾದಲ್ಲಿ ಮಾತ್ರ ತಾಯಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಮೊಟ್ಟೆಯನ್ನು ಬಿಟ್ಟು ಬೇರೆಡೆ ತೆರಳುತ್ತವೆ. ಇಷ್ಟೊಂದು ಪ್ರಮಾಣದಲ್ಲಿ ಮೊಟ್ಟೆಗಳಿಗೆ ಕೃತಕ ಕಾವು ನೀಡುವ ಅವಕಾಶ ಇದೇ ಮೊದಲ ಬಾರಿಗೆ ಲಭಿಸಿದೆ. - ಮುರಲಿಮಾಧವ ಪೆಲ್ತಾಜೆ, ಉರಗ ತಜ್ಞ