ಮುದಗಲ್: ಸುಕ್ಷೇತ್ರ ಅಂಕಲಿಮಠದ ಜಾತ್ರಾ ಮಹೋತ್ಸವ ಮೇ 18ರಿಂದ 20ರವರೆಗೆ ನಡೆಯಲಿದೆ ಎಂದು ಫಕೀರೇಶ್ವರ ಸ್ವಾಮೀಜಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು.
ನಿರುಪಾದೀಶ್ವರ ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 18ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ವಟುಗಳಿಗೆ ಅಯ್ಯಚಾರ, 19ರಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶಿವಭಜನೆ, ನಂತರ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.
ಸಂಜೆ 4 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 20ರಂದು ಬೆಳಗ್ಗೆ ಶಿವಭಜನಾ ಸಮಾಪ್ತಿಯಾಗುವುದು. ನಂತರ ಪಲ್ಲಕ್ಕಿ ಉತ್ಸವ ಮತ್ತು ಉಚ್ಚಾಯ ಜರುಗುವುದು. ಮಹಾಪ್ರಸಾದ, ಪೂಜೆ ನಡೆಯುವುದು. ಬೆಳಗ್ಗೆ 11 ಗಂಟೆಗೆ ಧರ್ಮಸಭೆ ಮತ್ತು ಸಾಮೂಹಿಕ ವಿವಾಹ,
ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರು ಸಾಧಕರಿಗೆ ನಿರುಪಾದೀಶ್ವರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ ಎಂದು ಮಾಹಿತಿ ನೀಡಿದರು. ಪ್ರಮುಖರಾದ ನಾಗನಗೌಡ ತುರಡಗಿ, ರಿಯಾಜ್ ಜಂಬಾಳಿ, ಬಸವರಾಜ ಕರಡಿ ಇದ್ದರು.