ಜಿಲ್ಲೆ

ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ 18.82 ಲಕ್ಷ ಲಾಭ

ಶನಿವಾರಸಂತೆ: ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 18.82 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಜಿ.ಜಿ.ಪರಮೇಶ್ ಹೇಳಿದರು.

ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಭಾನುವಾರ ನಡೆದ ಶನಿವಾರಸಂತೆ ಎಪಿಸಿಎಂಎಸ್‌ನ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ ಅಪೆಕ್ಸ್ ಬ್ಯಾಂಕ್ 1.50 ಲಕ್ಷ ರೂ. ಪ್ರೋತ್ಸಾಹ ಧನ ನೀಡಿದೆ. ಸಂಘದ ಸದಸ್ಯರ ಉತ್ತಮ ವಹಿವಾಟಿನಿಂದ ಮಾತ್ರ ಸಂಘದ ಬೆಳವಣಿಗೆ ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಸಂಘ ಇನ್ನಷ್ಟು ಲಾಭದಲ್ಲಿ ಸಾಗಲು ಶ್ರಮಿಸಲಾಗುವುದು ಎಂದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಪಿ.ಶಿವರಾಜ್ ಸಂಘದ ವಾರ್ಷಿಕ ವರದಿ ಮಂಡಿಸಿದರು.

ಸಂಘದ ಆಡಳಿತ ಮಂಡಳಿ ನಿರ್ದೇಶಕ ಎಸ್.ಸಿ.ಶರತ್‌ಶೇಖರ್, ಡಿ.ಬಿ.ಧರ್ಮಪ್ಪ, ಎಚ್.ವಿ.ಮಹಾಂತಪ್ಪ, ಗಿರಿಜಾಕರುಣಾಕರ್, ದೇವಾಂಬಿಕಾ ಮಹೇಶ್, ಜೆ.ಬಿ.ಪರಮೇಶ್, ಕುಮಾರ್ ನಾಯಕ್, ರಾಮಯ್ಯ, ಎಚ್.ಎಸ್.ಸಾಗರ್, ಸಿಇಒ ಶಿವರಾಜ್, ಇತರರು ಇದ್ದರು.

ಸಂಘದ ವತಿಯಿಂದ ಹತ್ತನೆ ತರಗತಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.