ಜಿಲ್ಲೆ

18.16 ಲಕ್ಷ ರೂ. ಕ್ರಿಪ್ಟೋ ಕರೆನ್ಸಿ ಹಣ ವಾಪಸ್

ಮೈಸೂರು: ಹಣ ಗಳಿಸಬೇಕು ಎನ್ನುವ ಹಂಬಲದಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ 25 ಲಕ್ಷ ರೂ. ಕಳೆದುಕೊಂಡಿದ್ದವರಿಗೆ ನಗರದ ಸಿಇಎನ್ ಕ್ರೈಂ (ಸೆನ್) ಪೊಲೀಸರು ಶ್ರಮವಹಿಸಿ 18.16 ಲಕ್ಷ ರೂ. ವಾಪಸ್ ಕೊಡಿಸಿದ್ದಾರೆ.
ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಲಾಭಾಂಶ ನೀಡುವುದಾಗಿ ವಾಟ್ಸ್‌ಆ್ಯಪ್‌ನಲ್ಲಿ ಬಂದಿದ್ದ ಸಂದೇಶವನ್ನು ನಂಬಿದ ನಗರದ ಜ್ಞಾನೇಶ್ ಅವರು ಒಟ್ಟು 25 ಲಕ್ಷ ರೂ.ಗಳನ್ನು ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ಹಾಕಿ ಮೋಸ ಹೋಗಿದ್ದರು. ಈ ಬಗ್ಗೆ ಏಪ್ರಿಲ್ 21ರಂದು ನೀಡಿದ ದೂರಿನ ಮೇರೆಗೆ ಸಿಇಎನ್ ಕ್ರೈಂ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಬಳಿಕ ಸಂಬಂಧಪಟ್ಟ ವಿವಿಧ ಬ್ಯಾಂಕ್‌ಗಳ ಸಹಕಾರದೊಂದಿಗೆ ಒಟ್ಟು 18,60,000 ರೂ.ಗಳನ್ನು ಡೆಬಿಟ್ ಫ್ರೀಜ್ ಮಾಡಿಸಿ ಜ್ಞಾನೇಶ್ ಅವರ ಬ್ಯಾಂಕ್ ಖಾತೆಗೆ ಮರು ಪಾವತಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯವನ್ನು ಪೊಲೀಸ್ ಕಮಿಷನರ್ ಬಿ.ರಮೇಶ್ ಬಾನೋತ್ ಪ್ರಶಂಸಿಸಿದ್ದಾರೆ.