ಆಯನೂರು: ಆಯನೂರು ಕೋಟೆ ಹಾಗೂ ಕೋಹಳ್ಳಿಯಲ್ಲಿ ಶ್ರೀ ಮಾರಿಕಾಂಬಾ ದೇವಿ, ದುರ್ಗಮ್ಮನ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.
ಜ.17 ಮತ್ತು 18ರಂದು ಆಯನೂರು ಕೋಟೆಯಲ್ಲಿ ಮಾರಿಕಾಂಬಾ ಜಾತ್ರೆ ಹಮ್ಮಿಕೊಂಡಿದ್ದು, 17ರ ಬೆಳಗ್ಗೆ ಗಂಗೆ ಪೂಜೆ, ಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ, ಶಾಂತಿ ಹೋಮ, ದೇವಿಯ ಪ್ರತಿಷ್ಠಾಪನೆ ನೆರವೇರಲಿದೆ. ರಾತ್ರಿ 10.30ಕ್ಕೆ ಮಂಗಳವಾದ್ಯ ಹಾಗೂ ರಾಜಬೀದಿ ಉತ್ಸವದೊಂದಿಗೆ ತವರು ಮನೆಯಿಂದ ಮಾರಿಕಾಂಬಾ ದೇವಿಯನ್ನು ಗದ್ದುಗೆಗೆ ಕರೆತರಲಾಗುವುದು.
ಜ.24 ಮತ್ತು 25ರಂದು ಕೋಹಳ್ಳಿಯಲ್ಲಿ ದುರ್ಗಮ್ಮ ಮತ್ತು ಮರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದು ಮಂಗಳವಾರ ಬೆಳಗ್ಗೆ 8.30ಕ್ಕೆ ಗಂಗೆಪೂಜೆ ನಡೆಯಲಿದೆ. 10.30ಕ್ಕೆ ದುರ್ಗಮ್ಮ ಹಾಗೂ ಮರಿಯಮ್ಮ ದೇವಿಯ ಪ್ರತಿಷ್ಠಾಪನೆಗೆ ಗಣಪತಿ ಪೂಜೆ, ಪುಣ್ಯಾಹವಾಚನ, ದುರ್ಗಾಹೋಮ ನಡೆಯಲಿದೆ. ರಾಜಬೀದಿ ಉತ್ಸವ ಹಾಗೂ ಮಂಗಳವಾದ್ಯದೊಂದಿಗೆ ದೇವಿಯನ್ನು ಗದ್ದುಗೆಗೆ ಕರೆತರಲಾಗುವುದು. ಜಾತ್ರೆಯ ಅಂಗವಾಗಿ ಆಯನೂರಿನಲ್ಲಿ ಜ.19, 20 ಮತ್ತು 21ರಂದು 3 ದಿನಗಳ ಕಾಲ ಬಹಿರಂಗ ಕುಸ್ತಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಗೆಲ್ಲುವ ಪಟುಗಳಿಗೆ ವಿಶೇಷ ಬಹುಮಾನವಾಗಿ ಬೆಳ್ಳಿಗದೆ ಹಾಗೂ ಬೆಳ್ಳಿದೀಪವನ್ನು ನೀಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಛತ್ರಪತಿ ನಾಯ್ಕ ತಿಳಿಸಿದರು.
ಜಾತ್ರೆ ಸಂಬಂಧ ಶುಕ್ರವಾರ ದುರ್ಗಮ್ಮನ ದೇವಸ್ಥಾನದಲ್ಲಿ ಸಭೆ ನಡೆಸಲಾಯಿತು. ದೇವಸ್ಥಾನಗಳಿಗೆ, ಗೋಪುರಗಳಿಗೆ ಬಣ್ಣ ಬಳಿಯುವ ಕೆಲಸಕ್ಕೆ ಚಾಲನೆಯನ್ನು ನೀಡಲಾಯಿತು. ದೇವರ ದರ್ಶನಕ್ಕೆ ಬರುವ ಜನರಿಗೆ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆ ಮಾಡಲು ಸಮಿತಿ ರಚನೆ ಮಾಡಿ ಜವಾಬ್ದಾರಿ ನೀಡಲಾಯಿತು. ವಿದ್ಯುತ್ ಅಲಂಕಾರ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಕುಸ್ತಿ ಸ್ಪರ್ಧೆಗ ಅಖಾಡದ ವ್ಯವಸ್ಥೆ, ಜಾತ್ರೆಯಲ್ಲಿ ಸೇರುವ ಅಂಗಡಿ ಮುಂಗ್ಗಟ್ಟುಗಳ ಸೇರಿದಂತೆ ಇತರ ವ್ಯವಸ್ಥೆಯನ್ನು ಚರ್ಚಿಸಲಾಯಿತು.