ಹಾಸನ: ಶ್ರೀಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಆಚರಣೆ ಅಂಗವಾಗಿ ಅ.17ರಿಂದ ಅ.20 ರವರೆಗೆ ಹಾಸನ ನಗರದ ಸಿಲ್ವರ್ ಜ್ಯೂಬಿಲಿ ಆರ್ಚರ್ಡ್ ಪಾರ್ಕ್‌ನಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ಹಾಸನ ಹಾಗೂ ಹೇಮಾವತಿ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಸಾರ್ವಜನಿಕರಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಹಾಗೂ ನಗರದ ಜನತೆಗೆ ತೋಟದ ಹವ್ಯಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮನೆ, ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರಿ ಶಾಲೆ, ಕಚೇರಿಗಳ ಅಂಗಳದಲ್ಲಿ ಅಲಂಕಾರಿಕ ತೋಟ ನಿರ್ವಹಣೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ಮನೆ, ಶಾಲೆ ಕಚೇರಿಗಳಿಗೆ ಭೇಟಿ ನೀಡಿ ತೀರ್ಪು ನೀಡಲಾಗುತ್ತದೆ.
ಪ್ಲಾಸ್ಟಿಕ್ ವಸ್ತುಗಳು, ಬಾಟಲಿಗಳು, ಟಯರುಗಳು ಇತ್ಯಾದಿ ಅನುಪಯುಕ್ತ ವಸ್ತುಗಳನ್ನು ಬಳಸಿ ಉದ್ಯಾನ ಸೌಂದರೀಕರಣದ ಸ್ಪರ್ಧೆ ಏರ್ಪಡಿಸಿದ್ದು, ಅತ್ಯುತ್ತಮ ಪ್ರದರ್ಶಿಕೆಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು.
ನಗರದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಹಾಸನ ನಗರದ ನಾಗರಿಕರು, ಖಾಸಗಿ ಸಂಸ್ಥೆಗಳು, ಸರ್ಕಾರಿ ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಅ.10ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಕೋರಿದೆ.
ಪಾಕ ಸ್ಪರ್ಧೆಗೆ ಅರ್ಜಿ ಆಹ್ವಾನ: ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿರುವ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಆವರಣದಲ್ಲಿ ಅಡುಗೆ ಪ್ರದರ್ಶನ, ಪಾಕ ಸ್ಪರ್ಧೆ ನಡೆಯುತ್ತದೆ. ಪ್ರಥಮ 10 ಸಾವಿರ ರೂ., ದ್ವಿತೀಯ 5 ಸಾವಿರ ರೂ.ಹಾಗೂ ತೃತೀಯ 3 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ.