ಜಿಲ್ಲೆ

17ರಂದು ಪ್ರತಿಭಟನೆಗೆ ನಿರ್ಧಾರ

ಕೊಳ್ಳೇಗಾಲ: ರೈತ ಸಂಘದ ನೂತನ ಪದಾಧಿಕಾರಿಗಳ ಸಭೆಯನ್ನು ಬುಧವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ತಾಲೂಕು ರೈತ ಸಂಘ ನೂತನವಾಗಿ ರಚನೆಗೊಂಡ ಬಳಿಕ ಎಪಿಎಂಸಿ ಆರವರಣದಲ್ಲಿ ಮೊದಲ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ತಾಲೂಕಿನ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಜು.17 ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.


ಮಳೆ ಕೊರತೆಯಿಂದ ಫಸಲು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಉದ್ಯೋಗ ಖಾತ್ರಿಯಲ್ಲಿ ನಡೆಯುತ್ತಿರುವ ಅವ್ಯವಹಾರ, ಪಟ್ಟಣದ ಎಪಿಎಂಸಿ ಆವರಣದಲ್ಲಿ ಅನೈತಿಕ ಚಟುವಟಿಕೆಗಳು, ಪುಂಡರ ಹಾವಳಿ ನಿಯಂತ್ರಿಸಲು ಕಾವಲುಗಾರರನ್ನು ನೇಮಿಸಬೇಕು. ಎಪಿಎಂಸಿ ರಸ್ತೆ ಹಾಗೂ ಎಪಿಎಂಸಿ ಆವರಣದಲ್ಲಿರುವ ರೈತ ಭವನಕ್ಕೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹೆಸರು ನಾಮಕರಣ ಮಾಡುವಂತೆ ಪ್ರತಿಭಟನೆ ವೇಳೆ ಒತ್ತಾಯಿಸಲಾಗುವುದು ಎಂದರು.


ಸಂಘದ ತಾಲೂಕು ಅಧ್ಯಕ್ಷ್ಷ ಶಿವಮಲ್ಲು, ಜಿಲ್ಲಾ ಗೌರವಾಧ್ಯಕ್ಷ ಶಿವರಾಮ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಶಿವಕುಮಾರ್, ತಾಲೂಕು ಗೌರವಾಧ್ಯಕ್ಷ ಮಾದೇವ, ಪ್ರಧಾನ ಕಾರ್ಯದರ್ಶಿ ಪೆರಿಯನಾಯಗಂ, ಕಾರ್ಯಾಧ್ಯಕ್ಷ ಜೋಯಲ್ ಪಿ.ನಿವಾಸ್, ಖಜಾಂಚಿ ಶಕ್ತಿವೇಲು, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಜಪಮಾಲೆ, ತಾಲೂಕು ಯುವ ಘಟಕದ ಸಂಚಾಲಕರಾದ ಮಹೇಶ್(ವಾಸು) , ಬಸವರಾಜು, ಗುಣಶೇಖರನ್, ಪದಾಧಿಕಾರಿಗಳಾದ ಚಾರ್ಲಿ, ನಿಕೋಲಸ್, ಎಲಿಜಬೆತ್ ರಾಣಿ, ಚಾರ್ಲೀಸ್, ಸತ್ತಿ, ಮಸಣಶೆಟ್ಟಿ, ಪೊನ್ನಸ್ವಾಮಿ, ಪ್ರಕಾಶ್ ಮೇರಿ, ವೆಂಕಟರಾಮ ಭೋವಿ, ಮಹದೇವಸ್ವಾಮಿ, ಸೂರಾಪುರ ಕುಮಾರ್ ಮತ್ತಿತರಿದ್ದರು.