ಚಿತ್ರದುರ್ಗ: ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಾ.17ರ ಮಧ್ಯಾಹ್ನ 3.30ಕ್ಕೆ ಒಂಬತ್ತು ಶಕ್ತಿದೇವತೆಗಳ ಸಂಗಮ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್‌ಕುಮಾರ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಚಾರಿಟಿ ಫೌಂಡೇಶನ್, ಜಿ.ಎಸ್.ಅನಿತ್‌ಕುಮಾರ್ ಅಭಿಮಾನಿಗಳ ಬಳಗದಿಂದ ಯುಗಾದಿ ಹಬ್ಬದ ಅಂಗವಾಗಿ ಕಾರ್ಯಕ್ರಮ ಆಯೋಜಿಸಿದ್ದು, ಆನಂದ್ ಗುರೂಜಿ ಅವರಿಂದ ಪೂಜೆ ನೆರವೇರಲಿದೆ ಎಂದರು.
ಅಂದು 8 ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಹಾಗೂ ಮಹಾಲಕ್ಷ್ಮೀ ನಮೋಸ್ತುತೇ, ದುರ್ಗಾಹೋಮ, ಕುಂಕುಮಾರ್ಚನೆ ಸೇರಿ ಇತರೆ ಪೂಜಾ ಕೈಂಕರ್ಯ ನೆರವೇರಲಿದೆ ಎಂದು ಹೇಳಿದರು.
ದುರ್ಗದ ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಕಾಳಿಕಾ ಮಠೇಶ್ವರಿ, ಬರಗೇರಮ್ಮ, ದುರ್ಗಾ ದೇವಿ, ಮಲೆನಾಡು ಚೌಡೇಶ್ವರಿ, ಧರ್ಮದೇವತೆ, ಬನಶಂಕರಿ, ಗೌರಸಂದ್ರಮಾರಮ್ಮ ದೇವತೆಗಳ ಉತ್ಸವ ಮೂರ್ತಿಗಳು ಪಾಲ್ಗೊಳ್ಳಲಿವೆ. ಜಿಲ್ಲೆಯ ವಿವಿಧ ಮಠಾಧೀಶರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಸವಿತಾ ಅನಿತ್‌ಕುಮಾರ್ ಮಾತನಾಡಿ, ಕಾರ್ಯಕ್ರಮದಲ್ಲಿ 8 ಸಾವಿರ ಮಹಿಳೆಯರಿಗೆ ಹಿಂದು ಸಂಪ್ರದಾಯದಂತೆ ಉಡಿ ತುಂಬುವ ಕಾರ್ಯ ನಡೆಯಲಿದೆ. 10 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದರು. ಬಿಜೆಪಿಯ ರತ್ನಮ್ಮ ಇದ್ದರು.
*ಬಾಕ್ಸ್*ಸ್ಪರ್ಧೆಗೆ ನಾನೂ ಸಿದ್ಧ
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು, ಬಿಜೆಪಿ ಟಿಕೆಟ್ ನೀಡಿದರೆ ಯಾರೂ ಬೇಡ ಎನ್ನುತ್ತಾರೆ ಹೇಳಿ ಎಂದು ಅನಿತ್‌ಕುಮಾರ್ ಪ್ರಶ್ನಿಸಿದರು. 2018ರಲ್ಲೇ ಅವಕಾಶ ಒದಗಿಬಂದಿತ್ತು. ಆದರೆ, ವೈಯಕ್ತಿಕ ಕಾರಣದಿಂದ ಸಾಧ್ಯವಾಗಲಿಲ್ಲ. ಹೈಕಮಾಂಡ್ ಎಲ್ಲಿ ಸೂಚಿಸಿದರೂ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.