ನೆಲಮಂಗಲ: ನೆಲಮಂಗಲ ಉಪವಿಭಾಗ ವ್ಯಾಪ್ತಿಯ ವಿವಿಧ ಕಳವು ಪ್ರಕರಣ ಭೇದಿಸಿರುವ ಪೊಲೀಸರು ಲಕ್ಷಾಂತರ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಜಪ್ತಿ ಮಾಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ನಗರ ಪೊಲೀಸ್ ಠಾಣಾ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ್, ನೆಲಮಂಗಲ, ಮಾದನಾಯನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 20 ಪ್ರಕರಣ ದಾಖಲಾಗಿದ್ದು, 17 ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿ ವಿವಿಧ ಕಳ್ಳತನ ಪ್ರಕರಣದಲ್ಲಿ ಇಬ್ಬರು ಸರಗಳ್ಳರು ಸೇರಿ 11 ಆರೋಪಿಗಳನ್ನು ಬಂಧಿಸಿ 150ಗ್ರಾಂ ಚಿನ್ನಾಭರಣ, 855 ಮೊಬೈಲ್, 5 ದ್ವಿಚಕ್ರವಾಹನ, 2 ಲಗೇಜ್ ಆಟೋ ಸೇರಿ 80 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ 270 ಗ್ರಾಂ ಚಿನ್ನಾಭರಣ, 1.41ಕೆಜಿ ಬೆಳ್ಳಿ, 25ಸಾವಿರ ರೂ.ನಗದು, 6 ದ್ವಿಚಕ್ರವಾಹನ ಸೇರಿ 15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕುಣಿಗಲ್ ವೃತ್ತದ ಬಳಿ ಅಳವಡಿಸಿರುವ 4 ಸಿಸಿ ಕ್ಯಾಮರಾ ದೃಶ್ಯಾವಳಿಯಿಂದ 5 ಕಳವು ಪ್ರಕರಣ ಪತ್ತೆಯಾಗಿವೆ ಎಂದು ತಿಳಿಸಿದರು.
ಠಾಣೆ ನಿರ್ಮಾಣಕ್ಕೆ ಭೂಮಿ ಪೂಜೆ: ಬೊಮ್ಮನಹಳ್ಳಿ ರಾ.ಹೆದ್ದಾರಿ 48ರ ಬಳಿಯ ಸರ್ವೇ ನಂ. 13ರ 1.36 ಎಕರೆ ವಿಸ್ತೀರ್ಣದಲ್ಲಿ 4.5 ಕೋಟಿ ರೂ.ವೆಚ್ಚದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ, ಗ್ರಾಮಾಂತರ ವೃತ್ತ ನಿರೀಕ್ಷಕ ಕಚೇರಿ, ಸಂಚಾರ ಪೊಲೀಸ್ ಠಾಣೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಹಾಗೆಯೇ ನಗರದ ಕುಣಿಗಲ್ ವೃತ್ತದ ಬಳಿ ಟ್ರಾಫಿಕ್ ದೀಪ ಹಾಗೂ ಸಿಸಿಕ್ಯಾಮರಾ ಹಾಗೂ ಸಂಚಾರ ಪೊಲೀಸ್ ಚೌಕಿ ಉದ್ಘಾಟಿಸಲಾಗಿದೆ ಎಂದು ಐಜಿಪಿ ತಿಳಿಸಿದರು.
ಜಾಮೀನು ವಜಾ: ಸಕ್ರಿಯವಾಗಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಹಾಗೂ ಅದನ್ನೇ ವೃತ್ತಿ ಮಾಡಿಕೊಂಡಿರುವ ಆರೋಪಿಗಳಿಗೆ ಜಾಮೀನು ವಜಾಮಾಡಲಾಗುತ್ತಿದೆ ಎಂದು ಐಜಿಪಿ ತಿಳಿಸಿದರು. ಈಗಾಗಲೇ ಮೇಲಧಿಕಾರಿಗಳು ಆದೇಶ ಮಾಡಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜತೆಗೆ ರಾಜಕಾಲುವೆಗಳು, ಕೆರೆ, ಕುಂಟೆ ಸೇರಿ ರಸ್ತೆ ಬದಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶ್ಲಾಘನೆ: ಡಿ.ವೈಎಸ್‌ಪಿ ಜಗದೀಶ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎ.ವಿ.ಕುಮಾರ್, ಬಿ.ಎಸ್.ಮಂಜುನಾಥ್ ನೇತೃತ್ವದಲ್ಲಿ ಎಸ್.ಐ ಎನ್.ಸುರೇಶ್, ದಾಳೇಗೌಡ, ಮುರಳಿ, ಪುಟ್ಟಸ್ವಾಮಿ, ಸಿಬ್ಬಂದಿ ನಾರಾಯಣ್‌ಸ್ವಾಮಿ, ಮಲ್ಲಗೊಂಡಿ, ರಾಜಶೇಖರ್, ರವಿಕುಮಾರ್, ಪರ್ವಿಜ್‌ಪಾಷ ಮತ್ತಿತರನ್ನು ಒಳಗೊಂಡ ತಂಡ ಪ್ರಕರಣ ಭೇದಿಸಿ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದು, ಪೊಲೀಸ ತಂಡಕ್ಕೆ ಕೇಂದ್ರವಲಯ ಪೊಲೀಸ್ ಮಹಾನಿರ್ದೇಶಕರು ಅಭಿನಂದನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಶ್ಲಾಘಿಸಿದರು.