ದಾವಣಗೆರೆ: ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಾ. 17ರಂದು ಹೊನ್ನಾಳಿ- ನ್ಯಾಮತಿ ತಾಲೂಕುಗಳ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲು ಆಗಮಿಸಲಿದ್ದಾರೆ ಎಂದು ಹೊನ್ನಾಳಿ ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ತಿಳಿಸಿದರು.
ತಾಪಂ ಸಾಮರ್ಥ್ಯಸೌಧದಲ್ಲಿ ಭಾನುವಾರ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹೊನ್ನಾಳಿಯ ಖಾಸಗಿ ಬಸ್ ನಿಲ್ದಾಣ ಬಳಿ ವೇದಿಕೆ ನಿರ್ಮಿಸಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
1800 ಕೋಟಿ ರೂ. ವೆಚ್ಚದ 975 ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಲಿದ್ದು, ಆಯಾ ಇಲಾಖೆಯ ಅಧಿಕಾರಿಗಳು ಶಿಲಾನಾಸ್ಯಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಇಒ ರಾಮಭೋವಿ ಮಾತನಾಡಿ, ಪಿಡಿಒಗಳು ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳ ಸಮಗ್ರ ಮಾಹಿತಿ ಜತೆ, ಅರ್ಹ ಫಲಾನುಭವಿಗಳು ಹಾಗೂ 2116 ಮನೆಗಳ ಫಲಾನುಭವಿಗಳನ್ನು ಕರೆ ತರುವಂತೆ ಸೂಚಿಸಿದರು.
ತಹಸೀಲ್ದಾರ್ ತಿರುಪತಿ, ಸಮಾಜ ಕಲ್ಯಾಣ ಇಲಾಖೆ ಉಮಾ, ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೃತ್ಯುಂಜಯ, ತುಂಗಾ ಮೇಲ್ದಡೆ ಯೋಜನೆ ಅಧಿಕಾರಿ ಮಂಜುನಾಥ್, ಬೆಸ್ಕಾಂ ಎಇಇ ಶ್ರೀನಿವಾಸ್ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ವೀರಭದ್ರಯ್ಯ ಮತ್ತಿತರರಿದ್ದರು.