ಜಿಲ್ಲೆ

ನೌಕರಿ ಕೊಡಿಸುವುದಾಗಿ ನಂಬಿಸಿ 17 ಲಕ್ಷ ರೂ. ಪಂಗನಾಮ

ನರಗುಂದ: ಕೆಎಂಎಫ್​ನಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಉಪನ್ಯಾಸಕನೊಬ್ಬ ಲಕ್ಷಾಂತರ ರೂಪಾಯಿ ಪಡೆದು ಪರಾರಿಯಾದ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ.

ಪಟ್ಟಣದ ವಿದ್ಯಾಗಿರಿ ಬಡಾವಣೆ ನಿವಾಸಿ, ಬಿಎಸ್ಸೆನ್ನೆಲ್ ನಿವೃತ್ತ ಸೂಪರಿಂಟೆಂಡೆಂಟ್ ಗುರುಸಿದ್ದಪ್ಪ ಶಂಕ್ರಪ್ಪ ಯಾವಗಲ್ ಮೋಸ ಹೋದವರು. ನಗರದ ಅಧ್ಯಾಪಕನಗರ ಬಡಾವಣೆ ನಿವಾಸಿ, ರೋಣ ತಾಲೂಕು ಯಾವಗಲ್ ಗ್ರಾಮದ ಸರ್ಕಾರಿ ಐಟಿಐ ಕಾಲೇಜ್ ಉಪನ್ಯಾಸಕ ಮಹೇಶ ಶರಣಪ್ಪ ಯರಗೇರಿ ಹಣ ಪಡೆದು ಪರಾರಿಯಾಗಿರುವ ವ್ಯಕ್ತಿ.

ಗುರುಸಿದ್ದಪ್ಪ ಯಾವಗಲ್ ಅವರು 2023ರಲ್ಲಿ ಇಬ್ಬರು ಮಕ್ಕಳಿಗೆ ನೌಕರಿ ಹುಡುಕಾಟ ನಡೆಸುತ್ತಿದ್ದರು. ಇದಕ್ಕೂ ಮೊದಲೇ ಪರಿಚಯಸ್ಥನಾಗಿದ್ದ ಮಹೇಶ ಯರಗೇರಿ, ಕೋಲಾರದ ಕೆಎಂಎಫ್ ಡಿವಿಜನ್ ಕಚೇರಿಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿದ್ದಾನೆ. ನೌಕರಿಗೆ ಪರ್ಯಾಯವಾಗಿ ಹಣ ಕೊಡಬೇಕಾಗುತ್ತದೆ ಎಂದು ನಂಬಿಸಿ ಫೋನ್ ಪೇ, ಪೇಟಿಎಂ, ಆರ್​ಟಿಜಿಎಸ್, ನೆಫ್ಟ್ ಹಾಗೂ ನಗದು ಮೂಲಕ ಹಂತಹಂತವಾಗಿ ಬರೋಬ್ಬರಿ 17 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ. ಈ ಕುರಿತು ಗುರುಸಿದ್ದಪ್ಪ ನರಗುಂದ ಪೊಲೀಸ್ ಠಾಣೆಗೆ ಜು. 22ರಂದು ದೂರು ನೀಡಿದ್ದಾರೆ. ಸಿಪಿಐ ಮಂಜುನಾಥ ನಡುವಿನಮನಿ ತನಿಖೆ ಕೈಗೊಂಡಿದ್ದಾರೆ.