ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17 ಕರೊನಾ ಪಾಸಿಟಿವ್

Dakshina Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 17 ಹೊಸ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ 15 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದು, ಸೌದಿ ಆರೇಬಿಯಾದಿಂದ ಬಂದವರು. ಓರ್ವ ಮಹಿಳೆ ಮಹಾರಾಷ್ಟ್ರದಿಂದ ಹಾಗೂ 70 ವರ್ಷದ ವೃದ್ಧ ಬೆಂಗಳೂರಿನಿಂದ ಬಂದವರು.

ಜೂನ್ 5ರಂದು ಸೌದಿ ಅರೆಬಿಯಾದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 13 ಮಂದಿ ಗಂಡಸರು ಹಾಗೂ ಜೂನ್ 8 ಮತ್ತು 10ರಂದು ಆಗಮಿಸಿದ್ದ ಇಬ್ಬರು ಗಂಡಸರಲ್ಲಿ ಸೋಂಕು ಪತ್ತೆಯಾಗಿದೆ. ಮುಂಬೈನಿಂದ ಜಿಲ್ಲೆಗೆ ಬಂದು ಕ್ವಾರಂಟೈನ್‌ಲ್ಲಿದ್ದ 38 ವರ್ಷದ ಮಹಿಳೆಯ ವರದಿಯೂ ಪಾಸಿಟಿವ್ ಎಂದು ಬಂದಿದೆ. ಜೂ.7ರಂದು ಬೆಂಗಳೂರಿನಿಂದ ಬಂದಿದ್ದ 70 ವರ್ಷದ ವೃದ್ಧರೊಬ್ಬರಿಗೆ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದ್ದೆ. ಎಲ್ಲರನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ 4 ಮಂದಿಯನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಪ್ರಸ್ತುತ 105 ಮಂದಿ ಚಿಕ್ಸಿತೆ ಪಡೆಯುತ್ತಿದ್ದು, ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ 50 ವರ್ಷದ ವ್ಯಕ್ತಿಯೊಬ್ಬರು ಐಸಿಯುನಲ್ಲಿದ್ದಾರೆ. 188 ಮಂದಿಯ ಗಂಟಲ ದ್ರವ ಮಾದರಿ ವರದಿ ಬರಲು ಬಾಕಿ ಇದೆ.

ಕಾಸರಗೋಡಿನ ನಾಲ್ವರಲ್ಲಿ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ನಾಲ್ವರು ಒಳಗೊಂಡಂತೆ ಕೇರಳದಲ್ಲಿ 78 ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 36 ಮಂದಿ ವಿದೇಶದಿಂದ, 31 ಮಂದಿ ಇತರ ರಾಜ್ಯಗಳಿಂದ ಆಗಮಿಸಿದ್ದರೆ ಇತರರಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಸೋಂಕು ಬಾಧಿಸಿದವರಲ್ಲಿ ಪ್ರಸಕ್ತ 104 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.