ತರೀಕೆರೆ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಕಾರ್ಡ್) 2022-23ನೇ ಸಾಲಿನಲ್ಲಿ 17.47 ಲಕ್ಷ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಚ್.ಆರ್.ನಾಗರಾಜ್ ತಿಳಿಸಿದರು.
ಬುಧವಾರ ಏರ್ಪಡಿಸಿದ್ದ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಮಾರ್ಚ್ ಅಂತ್ಯಕ್ಕೆ 6,710 ಸದಸ್ಯರಿದ್ದು, 4,636 ಮಂದಿ ವಿವಿಧ ಸಾಲ ಪಡೆದಿದ್ದಾರೆ. 62.61 ಲಕ್ಷ ರೂ. ಷೇರು ಬಂಡವಾಳ ಹೊಂದಿದೆ ಎಂದು ಮಾಹಿತಿ ನೀಡಿದರು.
ಲೆಕ್ಕ ವಿಭಾಗದ ಮಾಹಿತಿ ಗಣಕೀಕೃತವಾಗಿದೆ. ಸದಸ್ಯರಿಗೆ ತ್ವರಿತವಾಗಿ ಮಾಹಿತಿ ಲಭ್ಯವಾಗುವ ಜತೆಗೆ ಯಶಸ್ವಿಯಾಗಿ ಸೇವೆ ಸಲ್ಲಿಸಲು ಅನುಕೂಲವಾಗಲಿದೆ. ಈವರೆಗೆ 3.05 ಕೋಟಿ ರೂ. ಮೌಲ್ಯದ ಛಾಪಾ ಕಾಗದ ಮಾರಾಟವಾಗಿದ್ದು, ಇ-ಸ್ಟಾೃಂಪಿಂಗ್ ಮೂಲಕ 32.67 ಲಕ್ಷ ರೂ. ಆದಾಯ ಗಳಿಸಿದೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ಪಿಗ್ಮಿ ಸಂಗ್ರಹಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ದಿನದ ಉಳಿತಾಯದ ಪಾವತಿಗೆ ನಿಖರ ಠೇವಣಿ ಮೊತ್ತದ ದಾಖಲೆ ಇರುವ ರಸೀದಿಯನ್ನು ಸ್ಥಳದಲ್ಲೇ ದೊರೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. 1.21 ಕೋಟಿ ರೂ. ಕ್ರೋಡೀಕೃತ ನಷ್ಟವಿದ್ದು, ಸರಿದೂಗಿಸಲು ರೈತರು ಸಕಾಲದಲ್ಲಿ ಸಾಲ ಮರುಪಾವತಿಸಬೇಕು ಎಂದು ತಿಳಿಸಿದರು.
ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕರಾದ, ಎಚ್.ಎಂ.ಮಲ್ಲಿಕಾರ್ಜುನ, ಟಿ.ಟಿ.ಗೋವಿಂದಪ್ಪ, ಎಂ.ನಂಜುಂಡಪ್ಪ, ಎ.ಎಂ.ಯೋಗೀಶ್, ಟಿ.ಕೆ.ಶೇಖರಪ್ಪ, ಟಿ.ಶಿವಣ್ಣ, ಬಿ.ಎಸ್.ಹಾಲಸಿದ್ದಪ್ಪ, ವ್ಯವಸ್ಥಾಪಕ ಕೆ.ಬಿ.ನಾಗೇಶ್ ಇತರರಿದ್ದರು.