ಹಳಿಯಾಳ: ವೈಶ್ಯ ಕುಲಗುರು ಶ್ರೀ ಸಂಸ್ಥಾನ ಹಳದೀಪುರ ಶಾಂತಾಶ್ರಮ ಮಠಾಧೀಶರಾದ ಶ್ರೀ ವಾಮನಾಶ್ರಮ ಮಹಾಸ್ವಾಮಿಗಳ 16ನೇ ಪಟ್ಟಾಭಿಷೇಕ ವರ್ಧಂತಿ ಮಹೋತ್ಸವವು ಮಾ. 16ರಂದು ಪಟ್ಟಣದಲ್ಲಿ ನೆರವೇರಲಿದೆ.
ಪಟ್ಟಣದ ಬಿ.ಕೆ. ಹಳ್ಳಿ ರಸ್ತೆಯಲ್ಲಿರುವ ವೈಶ್ಯ ವಾಣಿ ಸಮಾಜದ ತಾಲೂಕು ಅಧ್ಯಕ್ಷ ಪ್ರಕಾಶ ಹಣುಮಶೇಟ್ ಅವರ ಬಡಾವಣೆಯಲ್ಲಿ 16ನೇ ಪಟ್ಟಾಭಿಷೇಕದ ವರ್ಧಂತಿ ಮಹೋತ್ಸವವು ಜರುಗಲಿದೆ. ಮಂಗಳವಾರ ರಾತ್ರಿ ಹಳಿಯಾಳಕ್ಕೆ ಆಗಮಿಸಿದ್ದ ಶ್ರೀಗಳು ಪೂಜಾವಿಧಿ ನೆರವೇರಿಸಿ ಮೌನವ್ರತ ಆರಂಭಿಸಿದ್ದಾರೆ. ಬುಧವಾರ ಸಂಜೆ ಶಾಸಕ ಆರ್.ವಿ. ದೇಶಪಾಂಡೆ ಅವರು ಪತ್ನಿ ಸಮೇತ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.
ಶ್ರೀಗಳ ಪಟ್ಟಾಭಿಷೇಕ ವರ್ಧಂತಿ ಮಹೋತ್ಸವದ ಮುನ್ನಾ ದಿನ ಸಂಜೆ ತುಳಜಾಭವಾನಿ ದೇವಸ್ಥಾನದಿಂದ ಭವ್ಯ ಶೋಭಾ ಯಾತ್ರೆ ನಡೆಯಲಿದೆ. 16ರಂದು ಬೆಳಗ್ಗೆ 8ಗಂಟೆಯಿಂದ ಸಹಸ್ರಮೋದಕ ಶ್ರೀ ಮಹಾಗಣಪತಿ ಹೋಮ, ಶ್ರೀ ರುದ್ರ ಹೋಮ, ಶ್ರೀ ಲಕ್ಷ್ಮೀ ನಾರಾಯಣ ಹೋಮ, ಶ್ರೀ ಚಂಡಿಕಾ ಹೋಮ, ಶ್ರೀ ಗಾಯತ್ರಿ ಹೋಮಗಳ ಪ್ರಾರಂಭ, 10.30ರಿಂದ ನಾಮ ಸಂಕೀರ್ತನೆ, ಶ್ರೀ ಗುರುಮಠದ ಗುರುಪರಂಪರೆಯ ಮಹತ್ವ ಕುರಿತು ಉಪನ್ಯಾಸ, 11.35ಕ್ಕೆ ಶ್ರೀಗಳ ಸಾನ್ನಿಧ್ಯದಲ್ಲಿ ಹೋಮಗಳ ಪೂರ್ಣಾಹುತಿ, ಮಹಾಮಂಗಳಾರತಿ, ಮಧ್ಯಾಹ್ನ ಧರ್ಮ ಸಭೆ, ವೇದಘೊಷ, ಗುರುವಂದನೆ, ಶ್ರೀಗಳಿಂದ ಆಶೀರ್ವಚನ ಮತ್ತು ಫಲಮಂತ್ರಾಕ್ಷತೆ ನಡೆಯಲಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಪ್ರಕಾಶ ಹಣುಮಶೇಟ್ ಹೇಳಿದ್ದಾರೆ.