ಕೊಡೇಕಲ್‌ನ ವಾರ್ಡ್ವೊಂದರಲ್ಲಿ ಚರಂಡಿ ಸ್ವಚ್ಛಗೊಳಿಸಿದ ವೇಳೆ ಕಂಡುಬAದ ತ್ಯಾಜ್ಯ ವಸ್ತುಗಳು. 
ಜಿಲ್ಲೆ

ತ್ಯಾಜ್ಯ ನಿರ್ವಹಣೆ ಜನರಲ್ಲೂ ಬೇಕು ಕಳಕಳಿ

ರಾಜು ಯಮಕನಮರಡಿ

ಕೊಡೇಕಲ್: ಸರಾಗವಾಗಿ ಕೊಳಚೆ ನೀರು ಹರಿಯಲಿ ಎಂಬ ಉದ್ದೇಶದಿಂದ ಚರಂಡಿ ನಿರ್ಮಿಸಿದ್ದರೂ ತ್ಯಾಜ್ಯ ವಸ್ತುಗಳನ್ನು ಹಾಕುವ ಡಸ್ಟ್​ ಬಿನ್‌ಗಳಾಗಿ ಮಾರ್ಪಟ್ಟಿರುವುದು ವಿಪರ್ಯಾಸ.

ಕೊಡೇಕಲ್ ದಿನೇದಿನೆ ಅಭಿವೃದ್ಧಿ ಹೊಂದುತ್ತಿದ್ದು, ಬಹತೇಕ ವಾರ್ಡ್​ಗಳಲ್ಲಿ ಉತ್ತಮ ಸಿಸಿ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚರಂಡಿಗಳಲ್ಲಿ ಕೊಳಚೆ ನೀರು ಹರಿಯುವ ಬದಲಿಗೆ ಮನೆಗಳಲ್ಲಿನ ಕಸ-ಕಡ್ಡಿ ತುಂಬಿ ನೀರು ಮುಂದೆ ಸಾಗದೆ ದುರ್ವಾಸನೆ ಬೀರುತ್ತ ಸಾಂಕ್ರಾಮಿಕ ರೋಗಗಳ ಭೀತಿ ಮೂಡಿಸುತ್ತಿವೆ.

ಗ್ರಾಮಗಳ ಸೌಂದರ್ಯ ಕಾಪಾಡುವುದು ಕೇವಲ ಸರ್ಕಾರದ ಕೆಲಸವಲ್ಲ, ಜನರದೂ ಪಾಲಿದೆ. ತ್ಯಾಜ್ಯ ವಿಲೇವಾರಿಗೆ ಸಾರ್ವಜನಿಕರು ಕೂಡ ತಮ್ಮ ಪಾಲಿನ ಕರ್ತವ್ಯ ನಿಭಾಯಿಸುವ ಅಗತ್ಯವಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಕರ್ಮಚಾರಿಗಳು ವಾರದಲ್ಲಿ ಎರಡು ಬಾರಿ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಾರೆ.

ಅವರು ಮರಳಿದ ಮರುಕ್ಷಣ ಚರಂಡಿಗಳಲ್ಲಿ ಕಸ-ಕಡ್ಡಿ, ಪ್ಲಾಸ್ಟಿಕ್, ಗಾಜಿನ ವಸ್ತು ಇತರ ತ್ಯಾಜ್ಯಗಳನ್ನು ಬಿಸಾಕುವ ಜನರು ಪರಿಸರ ಹಾಳು ಮಾಡುತ್ತಿದ್ದಾರೆ. ಇನ್ನೂ ಕೆಲ ವಾರ್ಡ್ಗಳಲ್ಲಿ ಚರಂಡಿ ಪಕ್ಕದಲ್ಲಿಯೇ ಜಾನುವಾರು ಕಟ್ಟಿ ಅವುಗಳಿಗೆ ಹಾಕುವ ಮೇವು ಚರಂಡಿಗೆ ಬಿದ್ದು ತುಂಬಿಕೊಳ್ಳುತ್ತಿದ್ದು, ಸ್ವಚ್ಛತೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಸೆಯಾಗಿದೆ.


ಗ್ರಾಪಂ ಕರ್ಮಚಾರಿಗಳು ವಾರದಲ್ಲಿ ಎರಡು ಸಲ ಚರಂಡಿಗಳ ಸ್ವಚ್ಛತೆ ಮಾಡುತ್ತಿದ್ದಾರೆ. ಆದರೂ ಅವುಗಳಲ್ಲಿನ ತ್ಯಾಜ್ಯ ಮಾತ್ರ ಕಡಿಮೆಯಾಗುತ್ತಿಲ್ಲ. ಪ್ರತಿ ವಾರ್ಡ್ನಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.
| ಶಿವಶರಣ ಕುಂಬಾರ ಗ್ರಾಪಂ ಅಧ್ಯಕ್ಷ ಕೊಡೇಕಲ್

ಹಲವು ಬಾರಿ ಜನರಿಗೆ ತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಮೂಡಿಸಲಾಗಿದೆ. ಆದರೂ ಚರಂಡಿಗಳಲ್ಲಿ ತ್ಯಾಜ್ಯಗಳನ್ನು ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
| ಸಂಗಣ್ಣ ನಾಗಬೇನಾಳ ಪಿಡಿಒ ಕೊಡೇಕಲ್ ಗ್ರಾಪಂ