ಕಾರಿನಲ್ಲಿ ವಶ ಪಡಿಸಿಕೊಂಡಿರುವ ಗಾಂಜಾ. 
ಜಿಲ್ಲೆ

ಆನೇಕಲ್​ನಲ್ಲಿ 169 ಕೆಜಿ ಗಾಂಜಾ ಜಪ್ತಿ

ಆನೇಕಲ್​ : ಅಪಾರ್ಟ್​ಮೆಂಟ್​ನಲ್ಲಿ ಕೆಜಿಗಟ್ಟಲೆ ಗಾಂಜಾ ಇಟ್ಟುಕೊಂಡಿದ್ದ ಆರೋಪಿ ಆನೇಕಲ್​ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯಿಂದ 169 ಕೆಜಿ ಗಾಂಜಾ, ಅರ್ಧ ಕೆಜಿಯಷ್ಟು ಹೈಡ್ರೋ ಗಾಂಜಾ ಮತ್ತು 800 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಕೇರಳ ಮೂಲದ ಸಚಿನ್​ (32) ಬಂಧಿತ ಆರೋಪಿ. ರಾಶಿ, ಸಂಜು ಮತ್ತು ಉಮೇದ್​ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ?: -ಕರ್ಪೂರಿನಲ್ಲಿರುವ ಅಪಾರ್ಟ್​ಮೆಂಟ್​ ಸಿಬ್ಬಂದಿ ಪ್ಲಾಟ್​ಗಳ ನಿರ್ವಹಣೆಗಾಗಿ ತಪಾಸಣೆ ನಡೆಸುತ್ತಿದ್ದ ವೇಳೆ ಪ್ಲಾಟ್​ ಒಂದರಲ್ಲಿ ವಾಸವಿದ್ದ ನಾಲ್ವರು ಮೊದಲ ಮಹಡಿಯಿಂದ ಹಾರಿ ಪರಾರಿಯಾಗಲು ಯತ್ನಿಸಿದ್ದಾರೆ.

ಅನುಮಾನಗೊಂಡ ಸಿಬ್ಬಂದಿ ಪ್ಲಾಟ್​ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಎರಡನೇ ಮಹಡಿ 109 ಪ್ಲಾಟ್​ನಲ್ಲಿದ್ದ ನಾಲ್ವರು ಮೊದಲ ಮಹಡಿಯಿಂದ ಜಂಪ್​ ಮಾಡಿದ್ದಾರೆ. ಇದರಲ್ಲಿ ಸಚಿನ್​ ಕಾಲು ಮುರಿದುಕೊಂಡು ಕುಸಿದು ಬಿದ್ದರೆ ಉಳಿದ ಮೂವರು ಪರಾರಿ ಆಗಿದ್ದಾರೆ. ಸಿಬ್ಬಂದಿ ಆರೋಪಿ ಸಚಿನ್​ನನ್ನು ಪ್ರಶ್ನಿಸಿದಾಗ ವಿಷಯ ತಿಳಿದುಬಂದಿದೆ. ಆರೋಪಿಗಳ ಕಾರು ಮತ್ತು ಪ್ಲಾಟ್​ ಪರಿಶೀಲಿಸಿದ ಸಿಬ್ಬಂದಿ ದಂಗಾಗಿದ್ದಾರೆ. ಅಪಾರ್ಟ್​ ಮೆಂಟ್​ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ತಿಳಿಸಿದ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ತಿಪ್ಪೇಸ್ವಾಮಿ ಹಾಗೂ ತಂಡ ಆರೋಪಿಯನ್ನು ಬಂಧಿಸಿ ಕಾರು ಹಾಗೂ ವಾಹನವನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.

ಪ್ಲಾಟ್​ನಿಂದಲೇ ಡೀಲ್​ : ಪ್ಲಾಟ್​ನಲ್ಲಿ 45 ದಿನಗಳಿಂದ ನಾಲ್ವರು ಆರೋಪಿಗಳು ವಾಸವಿದ್ದು, ಒಡಿಶಾ ಸೇರಿ ಹೊರರಾಜ್ಯಗಳಿಂದ ಗಾಂಜಾ ತರಿಸುತ್ತಿದ್ದರು ಎನ್ನಲಾಗಿದೆ, ಪ್ಲಾಟ್​ನಲ್ಲಿ ಸಣ್ಣ ಸಣ್ಣ ಪ್ಯಾಕೆಟ್​ಗಳಾಗಿ ಪ್ಯಾಕಿಂಗ್​ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇಡೀ ಪ್ರಕರಣವನ್ನು ಬೆಂಗಳೂರು ಗ್ರಾಮಾಂತರ ಅಡಿಷನಲ್​ ಎಸ್ಪಿ ನಾಗರಾಜ್​ ಮತ್ತು ತಂಡಕ್ಕೆ ವಹಿಸಿದ್ದು, ದಂಧೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಶಿಕ್ಷಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.