ಚಿತ್ರದುರ್ಗ: ವಿಶ್ವವನ್ನೇ ಬೆರಗಾಗಿಸಿ, ಸರ್ವರೂ ಭಾರತದತ್ತ ನೋಡುವಂತೆ ಮಾಡುವ ಮೂಲಕ ಚಂದ್ರನ ಮೇಲೆ ಯಶಸ್ವಿಯಾಗಿ ‘ವಿಕ್ರಂ ಲ್ಯಾಂಡರ್’ ಬುಧವಾರ ಕಾಲಿಟ್ಟಿದ್ದೆ ತಡ ಜಿಲ್ಲೆಯ ಹಲವೆಡೆ ಸಂಭ್ರಮ ಮುಗಿಲುಮುಟ್ಟಿತ್ತು.
ಇಸ್ರೋ ವಿಜ್ಞಾನಿಗಳ ಶ್ರಮದ ಫಲವಾಗಿ ಚಂದ್ರಯಾನ-3 ನೌಕೆ ಸಂಜೆ 6.4ರ ಸಮಯಕ್ಕೆ ಸರಿಯಾಗಿ ಸಫಲತೆ ಕಂಡೊಡನೆ ಕೋಟೆನಾಡಿನ ಜನರು ಬೀದಿಗಿಳಿದು ಸಂಭ್ರಮಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಬಿಜೆಪಿ ಮುಖಂಡರು, ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಹೀಗೆ ಜಿಲ್ಲೆಯ ಹಲವು ಭಾಗಗಳ ವೃತ್ತಗಳು ಇದಕ್ಕೆ ಹೊರತಾಗಿರಲಿಲ್ಲ.
ಈ ಮಹತ್ವಕಾಂಕ್ಷಿ ಯೋಜನೆ ಯಶಸ್ವಿಯಾಗಲೆಂದು ಬೆಳಗ್ಗೆಯಿಂದಲೇ ಹಲವು ದೇಗುಲಗಳಲ್ಲಿ ಪ್ರಾರ್ಥಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಬಿಜೆಪಿ ಮುಖಂಡರು ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಸ್ವಾಮಿಗೆ, ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಸ್ವಾಮಿಯ ಮೂರ್ತಿಗೆ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪದಾಧಿಕಾರಿಗಳಾದ ಭಾರ್ಗವಿ ದ್ರಾವಿಡ್, ನವೀನ್ ಚಾಲುಕ್ಯ, ನಾಗರಾಜ್ ಬೇದ್ರೇ, ಶಿವಪ್ರಕಾಶ್ ದಗ್ಗೆ, ಯಶವಂತ, ಸಂಪತ್, ಭರತ್, ಸುರೇಶ್, ಶಿವಣ್ಣಚಾರ್, ರಾಮು, ಚಂದ್ರು, ಬಾಂಡ್ ರವಿ, ಮಂಜುಳಮ್ಮ, ಬಳಗದ ಗಿರೀಶ್, ಬಾಬು, ಎಚ್.ಎಸ್.ಟಿ.ಸ್ವಾಮಿ, ರವಿಕುಮಾರ್, ಮಂಜುನಾಥ್, ರಾಘವೇಂದ್ರ, ಹರೀಶ್, ಗಣೇಶ್ ಇತರರಿದ್ದರು.
ವಿಶ್ವ ಗುರು ಆಗುವುದರಲ್ಲಿ ಸಂಶಯವಿಲ್ಲ: ಸಂಭ್ರಮಾಚರಣೆ ವೇಳೆ ಮಾತನಾಡಿದ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿಶ್ವ ಮಟ್ಟದಲ್ಲಿ ಭಾರತ ಪ್ರಜ್ವಲಿಸುತ್ತಿದೆ. ಇಸ್ರೋ ವಿಜ್ಞಾನಿಗಳ ಸಾಧನೆ ಅವಿಸ್ಮರಣೀಯ. ಮುಂದಿನ ದಿನಗಳಲ್ಲಿ ವಿಶ್ವ ಗುರು ಆಗುವುದರಲ್ಲಿ ಸಂಶಯವಿಲ್ಲ ಎಂದರು.
ವಿಶ್ವ ಹಿಂದು ಪರಿಷತ್, ಬಜರಂಗದಳದಿಂದ ಆನೆಬಾಗಿಲು ಪ್ರಸನ್ನ ಗಣಪತಿ, ವೆಂಕಟರಮಣ ಸ್ವಾಮಿ ಸನ್ನಿಧಿಯಲ್ಲಿ ಚಂದ್ರಯಾನ ಯಶಸ್ಸಿಗೆ ಪ್ರಾರ್ಥಿಸಲಾಯಿತು. ಹಿಂದು ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಮಾರ್ಗದರ್ಶಕ ಬದ್ರಿನಾಥ್, ಪದಾಧಿಕಾರಿಗಳಾದ ಪಿ.ರುದ್ರೇಶ್, ಕೇಶವ್, ಸಂದೀಪ್, ಶ್ರೀನಿವಾಸ್, ರಂಗಸ್ವಾಮಿ, ಶಶಿಧರ್, ವಿಠ್ಠಲ್, ರಾಜೇಶ್, ಕಿಶೋರ್, ಪ್ರಮೋದ್, ಸಂಪತ್ ಇತರರಿದ್ದರು.
ಟೌನ್ ಕೋ-ಆಪರೇಟಿವ್ ಸೊಸೈಟಿಯಲ್ಲೂ ಕಾರ್ಯಕಾರಿಣಿ ಮಂಡಳಿ ಸದಸ್ಯರು ನೆರಪ್ರಸಾರ ವೀಕ್ಷಿಸಿ, ಯಶಸ್ವಿ ಬಳಿಕ ಸಿಹಿ ಹಂಚಿ ಸಂಭ್ರಮಾಚರಿಸಿದರು. ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ, ಉಪಾಧ್ಯಕ್ಷ ಸೂರ್ಯಪ್ರಕಾಶ್, ನಿರ್ದೇಶಕ ನಾಗರಾಜ್ ಬೇದ್ರೆ, ಕಾರ್ಯದರ್ಶಿ ನಹೀಂ ಇತರರಿದ್ದರು.
ಬಾಹ್ಯಾಕಾಶದಲ್ಲಿ ಭಾರತ ವಿಶ್ವಗುರು: ವಿಜ್ಞಾನ ಕ್ಷೇತ್ರದಲ್ಲಿ ಭಾರತ ಅಭಿವೃದ್ಧಿಯತ್ತ ಸಾಗುತ್ತಿದ್ದು, ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಲಿದೆ. ಇಸ್ರೋ ವಿಶ್ವಕ್ಕೆ ಮಾದರಿಯಾಗಿದೆ. ಈ ಐತಿಹಾಸಿಕ ಸಾಧನೆಯ ಹಿಂದೆ ಹಗಲಿರುಳೆನ್ನದೆ ಅವಿಶ್ರಾಂತವಾಗಿ ದುಡಿದ ವಿಜ್ಞಾನಿಗಳಿಂದಾಗಿ ದೇಶವೇ ಹೆಮ್ಮೆಪಡುತ್ತಿದೆ. ಬಾಹ್ಯಾಕಾಶದಲ್ಲಿ ಭಾರತ ವಿಶ್ವ ಗುರುವಾದ ಆ.23 ಭಾರತೀಯರಿಗೆ ಮರೆಯಲಾಗದ ಸುದಿನ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಯಿಯೊಡೆದು ಪೂಜೆ: ಜಿಲ್ಲೆಯ ಅನೇಕರು ತಮ್ಮ ಮನೆಗಳಲ್ಲೇ ಚಂದ್ರನ ಮೇಲೆ ನೌಕೆ ನಿಲ್ಲುವುದನ್ನು ತದೇಕಚಿತ್ತದಿಂದ ವೀಕ್ಷಿಸಿದರು. ಸಫಲವಾದ ಬಳಿಕ ದೇವರ ಕೋಣೆ, ಮನೆಯ ಹೊರಗಡೆ ತೆಂಗಿನ ಕಾಯಿಯೊಡೆದು ಪೂಜೆ ಸಲ್ಲಿಸಿ, ಸಂಭ್ರಮಿಸಿದ್ದು ಕಂಡು ಬಂದಿತು.