ಹನೂರು: ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದ ಮನೆಯೊಂದರ ಬಾಗಿಲಿನ ಬೀಗ ಮುರಿದ ಕಳ್ಳರು 162 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.
ಗ್ರಾಮದ ಮಹದೇವಪ್ರಸಾದ್ ಅವರು ಜೂ.7 ರಂದು ಮನೆಗೆ ಬೀಗ ಹಾಕಿಕೊಂಡು ಹಿಂಬಾಗಿಲಿನ ಕೀಲಿ ಕೈ ಅನ್ನು ಬಾಮೈದ ಕೇಂಪೇಗೌಡ ಅವರಿಗೆ ನೀಡಿ ಬೆಂಗಳೂರಿನ ಮಗನ ಮನೆಗೆ ತೆರಳಿದ್ದರು. ಗುರುವಾರ ಸಂಜೆ 6 ಗಂಟೆಯ ವೇಳೆಯಲ್ಲಿ ಗ್ರಾಮಕ್ಕೆ ಆಗಮಿಸಿದ ಮಹದೇವಪ್ರಸಾದ್ ಅವರು ಬಾಮೈದನಿಂದ ಕೀಲಿಕೈ ಪಡೆದು ಮನೆಗೆ ತೆರಳಿದ್ದಾರೆ. ಈ ವೇಳೆ ಮೇಲಂತಸ್ತಿ ನಲ್ಲಿದ್ದ ಬೆಡ್ ರೂಂಗೆ ತೆರಳಿದಾಗ ಬೀರುವಿನ ಬಾಗಿಲು ಮುರಿದಿರುವುದು ಕಂಡು ಪರಿಶೀಲಿಸಿದಾಗ 162 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ನಗದು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.
ಸುದ್ದಿ ತಿಳಿದು ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ ಹಾಗೂ ಸಿಬ್ಬಂದಿ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಬಳಿಕ ಜಿಲ್ಲಾ ಶ್ವಾನದಳ ಹಾಗೂ ಬೆರಳಚ್ಚು ಸಿಬ್ಬಂದಿಯಿಂದಲೂ ಪರಿಶೀಲನೆ ನಡೆಯಿತು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖಾ ಕ್ರಮ ಕೈಗೊಂಡಿದ್ದಾರೆ.