ಬೀದರ್: ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ನಗದು ರಹಿತ ವೈದ್ಯಕೀಯ ಸೇವೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಜಿಲ್ಲೆಯ 16 ಖಾಸಗಿ ಆಸ್ಪತ್ರೆಗಳು ನೋಂದಣಿಯಾಗಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ನೋಂದಣಿಯಾದ ಆಸ್ಪತ್ರೆಗಳಲ್ಲಿ ಬೀದರ್‍ನ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ, ಗುದಗೆ ಆಸ್ಪತ್ರೆ, ಭಾಲ್ಕೆ ವೈದೇಹಿ ಆಸ್ಪತ್ರೆ, ಶ್ರೀ ಆಸ್ಪತ್ರೆ, ಗುರುನಾನಕ ಆಸ್ಪತ್ರೆ, ವಾಸು ಆಸ್ಪತ್ರೆ ಮೊದಲಾದವು ಸೇರಿವೆ. ತಾಲ್ಲೂಕು ಕೇಂದ್ರದಲ್ಲಿ ಇರುವ ಆಸ್ಪತ್ರೆಗಳೂ ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರಿಗೆ ಶೀಘ್ರವೇ ಯೋಜನೆ ಸೌಲಭ್ಯ ದೊರಕಲಿದೆ. ಯೋಜನೆ ಜಾರಿಯಾದ ನಂತರ ನೌಕರರು ಕೈಯಲ್ಲಿ ಹಣವಿಲ್ಲದಿದ್ದರೂ, ಆಸ್ಪತೆಗೆ ದಾಖಲಾಗಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.
ಜಿಲ್ಲೆಯಲ್ಲಿ 18 ಸಾವಿರ ಸರ್ಕಾರಿ ನೌಕರರು ಇದ್ದಾರೆ. ನೌಕರರು ಹಾಗೂ ಅವರ ಅವಲಂಬಿತರು ಸೇರಿ ಸುಮಾರು 1 ಲಕ್ಷ ಜನರಿಗೆ ಯೋಜನೆಯ ಲಾಭ ಸಿಗಲಿದೆ ಎಂದರು.
ಆರೋಗ್ಯ ಇಲಾಖೆ ಅಧಿಕಾರಿ ಡಾ. ಶಿವಶಂಕರ ಭತಮುರ್ಗೆ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ವಿಭಾಗೀಯ ಸಂಯೋಜಕ ಡಾ. ಶಿವಶಂಕರ ದೇಶಮುಖ, ಜಿಲ್ಲಾ ಸಂಯೋಜಕಿ ಡಾ. ಪೂಜಾ, ಸಿ. ಆನಂದರಾವ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಉಪಾಧ್ಯಕ್ಷ ಓಂಕಾರ ಮಲ್ಲಿಗೆ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಮೇತ್ರೆ, ಚಿಟಗುಪ್ಪ ತಾಲ್ಲೂಕು ಘಟಕದ ಅಧ್ಯಕ್ಷ ರಾಜಕುಮಾರ ಬೇಲೂರೆ, ಹುಲಸೂರು ತಾಲ್ಲೂಕು ಘಟಕದ ಅಧ್ಯಕ್ಷ ಭೀಮಾಶಂಕರ ಆದೆಪ್ಪ, ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ವೈದ್ಯರು ಇದ್ದರು.