ಜಿಲ್ಲೆ

ಉಡುಪಿ ಜಿಲ್ಲೆಯಲ್ಲಿ 16 ಮಂದಿ ಕರೊನಾ ಶಂಕಿತರು ಆಸ್ಪತ್ರೆಗೆ ದಾಖಲು

ಉಡುಪಿ: ಜನತಾ ಕರ್ಫ್ಯೂ ಜಾರಿಯಲ್ಲಿರುವ ಸಮಯದಲ್ಲೇ ಉಡುಪಿ ಜಿಲ್ಲೆಯಲ್ಲಿ ಭಾನುವಾರ 16 ಮಂದಿ ಕರೊನಾ ಶಂಕಿತರು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಕಳ ತಾಲೂಕು ಆಸ್ಪತ್ರೆಗೆ 3 ಮಂದಿ, ಕುಂದಾಪುರದಲ್ಲಿ 2 ಮಂದಿ, ಉಡುಪಿಯಲ್ಲಿ 11 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಉಡುಪಿ ಆಸ್ಪತ್ರೆಗೆ ದಾಖಲಾಗಿರುವ ಒಬ್ಬರು ಹೊರಜಿಲ್ಲೆಯವರು. ಉಳಿದ ಎಲ್ಲರೂ ಉಡುಪಿ ಜಿಲ್ಲೆಯವರು. ಇದರಲ್ಲಿ 21 ವರ್ಷದ ಪುರುಷ, 62 ವರ್ಷದ ಮಹಿಳೆ, 74 ವರ್ಷದ ಪುರುಷ, 31 ವರ್ಷದ ಪುರುಷ, 75 ವರ್ಷದ ಮಹಿಳೆ, 41 ವರ್ಷದ ಮಹಿಳೆ ಈ ಸ್ಥಳೀಯರಾಗಿದ್ದು, ವಿದೇಶ ಪ್ರಯಾಣ ಬೆಳೆಸಿಲ್ಲ.

ಜಪಾನ್‌ನಿಂದ ಆಗಮಿಸಿದ 35 ವರ್ಷದ ಪುರುಷ, ಸೌದಿಯಿಂದ ಆಗಮಿಸಿದ ಮಹಿಳೆ ಜತೆಗೆ ಸಂಪರ್ಕ ಹೊಂದಿದ್ದ 24 ವರ್ಷದ ಪುರುಷ, ಸೌದಿ ಅರೇಬಿಯಾದಿಂದ ಬಂದಿದ್ದ 58 ವರ್ಷದ ಮಹಿಳೆ, ಸಿಂಗಾಪುರದಿಂದ ಆಗಮಿಸಿದ ವ್ಯಕ್ತಿ ಜತೆ ಸಂಪರ್ಕ ಹೊಂದಿದ್ದ 25 ವರ್ಷದ ಮಹಿಳೆ, ಮಸ್ಕತ್‌ನಿಂದ ಆಗಮಿಸಿದ 39 ವರ್ಷದ ವ್ಯಕ್ತಿ, ಅಬುದಾಬಿಯಿಂದ ಆಗಮಿಸಿದ 29 ವರ್ಷದ ವ್ಯಕ್ತಿ, ಮುಂಬೈಯಿಂದ ಬಂದ 50 ವರ್ಷದ ಮಹಿಳೆ, 38 ವರ್ಷದ ವ್ಯಕ್ತಿ ಹಾಗೂ 16 ವರ್ಷದ ಬಾಲಕ, ತೆಲಂಗಾಣದಿಂದ ಆಗಮಿಸಿದ 51 ವರ್ಷದ ಪುರುಷ ಸೇರಿದಂತೆ 10 ಮಂದಿ ಶಂಕಿತರನ್ನು ಚಿಕಿತ್ಸೆಗೆ ದಾಖಲಿಸಿ, ಗಂಟಲಿನ ದ್ರವ ಮಾದರಿಯನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಒಟ್ಟು 28 ಮಂದಿ ವಿವಿಧ ಆಸ್ಪತೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 26 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. ವಿದೇಶದಿಂದ ಆಗಮಿಸಿದ 22 ಮಂದಿಗೆ ಸ್ವಯಂ ದಿಗ್ಬಂಧನಕ್ಕೆ ಆದೇಶಿಸಲಾಗಿದೆ.

ಐದು ಬಸ್‌ಗೆ ತಡೆ: ಮುಂಬೈಯಿಂದ ಜಿಲ್ಲೆಗೆ ಆಗಮಿಸುತ್ತಿದ್ದ 5 ಖಾಸಗಿ ಬಸ್‌ಗಳನ್ನು ಬೈಂದೂರಿನ ಶಿರೂರು ಗಡಿಯಲ್ಲಿ ಭಾನುವಾರ ಬೆಳಗ್ಗೆ ತಡೆದು ತಪಾಸಣೆಗೆ ಒಳಪಡಿಸಿದ್ದು, ಬಸ್‌ನಲ್ಲಿದ್ದ 8 ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದವರನ್ನು ಚಿಕಿತ್ಸೆಗಾಗಿ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಮುಂಬೈಯಲ್ಲಿ ಉದ್ಯೋಗಕ್ಕಿದ್ದ ಊರಿನ ನೂರಾರು ಮಂದಿ 5 ಖಾಸಗಿ ಬಸ್‌ನಲ್ಲಿ ಊರಿಗೆ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಬೆಳಗಾವಿಯಲ್ಲಿಯೇ ತಡೆಯುವ ಪ್ರಯತ್ನ ಮಾಡಲಾಗಿದ್ದರೂ ಸಾಧ್ಯವಾಗಿರಲ್ಲ. ಬಳಿಕ ಶಿರೂರು ಗಡಿಯಲ್ಲಿ ವೈದ್ಯಕೀಯ ಮತ್ತು ಪೊಲೀಸರನ್ನು ಒಳಗೊಂಡ ತಂಡ 5 ಬಸ್‌ಗಳನ್ನು ತಡೆದು ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ 8 ಮಂದಿಗೆ ಶೀತ, ಜ್ವರ, ಕೆಮ್ಮು ಇರುವ ಬಗ್ಗೆ ತಿಳಿದು ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ, ನಿಗಾ ಇರಿಸಲಾಗಿದೆ. ಎಲ್ಲ ಪ್ರಯಾಣಿಕರ ಮೊಬೈಲ್ ನಂಬರ್, ಮನೆ ವಿಳಾಸ ಪಡೆದುಕೊಂಡಿದ್ದೇವೆ. ಇವರ ಮೇಲೂ ನಿಗಾ ಇಡಲಾಗುತ್ತದೆ. ಮುಂಬೈಯಿಂದ ಇನ್ನೂ ಮೂರು ಬಸ್‌ನಲ್ಲಿ ಊರಿಗೆ ಬರುತ್ತಿರುವ ಮಾಹಿತಿ ಸಿಕ್ಕಿದ್ದು, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಬೈಂದೂರು ತಹಸೀಲ್ದಾರರು ನಿಗಾ ಇಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಯವರು ಸುದ್ದಿಗಾರರಿಗೆ ತಿಳಿಸಿದರು.

ಥರ್ಮಲ್ ಗನ್ ಕೊರತೆ: ಜಿಲ್ಲೆಯ ಗಡಿಗಳಲ್ಲಿ ದೂರದ ಊರಿನಿಂದ ಆಗಮಿಸಿದವರ ಆರೋಗ್ಯ ತಪಾಸಣೆ ನಡೆಸಲು ಥರ್ಮಲ್ ಗನ್ ಕೊರತೆ ಎದುರಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.  ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸದ್ಯ 3 ಥರ್ಮಲ್ ಗನ್‌ಗಳಿವೆ. ಆನ್‌ಲೈನ್‌ನಲ್ಲಿ ಖರೀದಿಗೂ ಸ್ಟಾಕ್ ಕೊರತೆ ಇದೆ. 2 ಚೆಕ್‌ಫೋಸ್ಟ್ ಹಾಗೂ 1 ಗನ್ ಮಲ್ಪೆ ಬಂದರಿಗೆ ನೀಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವಿಷಯ ತಿಳಿಸಲಾಗಿದೆ. ಥರ್ಮಲ್ ಗನ್ ಪೂರೈಕೆಯಾದ ಕೂಡಲೇ ಶಿರೂರು ಮತ್ತು ಪಡುಬಿದ್ರಿ, ಹೆಜಮಾಡಿಯಲ್ಲಿ ಚೆಕ್‌ಪೋಸ್ಟ್ ತೆರೆಯಲಾಗುವುದು ಎಂದು ವಿವರಿಸಿದರು.