ಹಾವೇರಿ: ಜಿಲ್ಲಾ ಕೇಂದ್ರವಾಗಿರುವ ಹಾವೇರಿ ನಗರಸಭೆಯ 2021-22ನೇ ಸಾಲಿಗೆ 16.55 ಲಕ್ಷ ರೂ.ಗಳ ಉಳಿತಾಯ ಬಜೆಟ್ ಅನ್ನು ಅಧ್ಯಕ್ಷ ಸಂಜೀವಕುಮಾರ ನೀರಲಗಿ ಶನಿವಾರ ಮಂಡಿಸಿದರು.
ಸ್ಥಳೀಯ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಆಯವ್ಯಯ ಮಂಡಿಸಿದರು.
ಮುಂಬರುವ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ, ನೀರಿನ ಕಂದಾಯ, ಅಭಿವೃದ್ಧಿ ಶುಲ್ಕ, ಮಳಿಗೆ ಬಾಡಿಗೆ ಇತ್ಯಾದಿ ನಗರಸಭೆ ಸ್ವಂತದ ಮೂಲಗಳಿಂದ 29.40 ಕೋಟಿ ರೂ., ಬಂಡವಾಳ ಖಾತೆಯಿಂದ 12.68 ಕೋಟಿ, ಅಸಾಧಾರಣ ಖಾತೆಯಿಂದ 25.34 ಕೋಟಿ ರೂ. ಸೇರಿ ಒಟ್ಟು 67,43,13,945 ರೂ. ಆದಾಯವನ್ನು ನಗರಸಭೆಗೆ ನಿರೀಕ್ಷಿಸಲಾಗಿದೆ. ಇದರಲ್ಲಿ 67,26,58,945 ರೂ. ಖರ್ಚು ನಿಗದಿಪಡಿಸಲಾಗಿದೆ. ನೀರು ಬಳಕೆ ಶುಲ್ಕದಿಂದ 2 ಕೋಟಿ ರೂ., ನೀರು ಸರಬರಾಜು, ಒಳಚರಂಡಿ ಸಂಪರ್ಕ, ದಂಡ ಇತ್ಯಾದಿಗಳಿಂದ 75 ಲಕ್ಷ, ಆಸ್ತಿ ತೆರಿಗೆ ವಸೂಲಾತಿಯಿಂದ 5 ಕೋಟಿ, ವಾಣಿಜ್ಯ ಮಳಿಗೆಗಳಿಂದ 1.92 ಕೋಟಿ, ವ್ಯಾಪಾರ ಪರವಾನಗಿಯಿಂದ 20 ಲಕ್ಷ, ಸಂತೆ, ಮಾರುಕಟ್ಟೆ ಹರಾಜಿನಿಂದ 19.50 ಲಕ್ಷ, ಕಟ್ಟಡ ಪರವಾನಗಿ ಶುಲ್ಕವಾಗಿ 45 ಲಕ್ಷ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ.
ರಾಜ್ಯ ಹಣಕಾಸು ಯೋಜನೆಯಲ್ಲಿ ಮುಕ್ತ ಅನುದಾನ ನಿಧಿಯಾಗಿ 18.50 ಕೋಟಿ ರೂ., ವೇತನ ನಿಧಿ 6.81 ಕೋಟಿ, 6.28 ಕೋಟಿ ವಿದ್ಯುತ್ ಬಿಲ್ ಪಾವತಿ ಅನುದಾನ, ಕುಡಿಯುವ ನೀರಿನ ಪರಿಹಾರ ಯೋಜನೆಗೆ 2 ಕೋಟಿ ರೂ. ಸೇರಿ 33.59 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಇದರಲ್ಲಿ ಸಿಬ್ಬಂದಿ ವೇತನ, ನೀರು ಪೂರೈಕೆ, ವಿವಿಧ ಅಭಿವೃದ್ಧಿ ಕಾಮಗಾರಿ, ಕಚೇರಿ ನಿರ್ವಹಣೆ ಇತ್ಯಾದಿಗಳಿಗೆ 67.26 ಲಕ್ಷ ರೂ. ಖರ್ಚಾಗಲಿದೆ. ಇದೇ ಮೊದಲ ಬಾರಿಗೆ ನಗರಸಭೆ ಬಜೆಟ್ನಲ್ಲಿ ಅನಾರೋಗ್ಯ ಅಥವಾ ಅಪಘಾತಕ್ಕೊಳಗಾದ ಪತ್ರಕರ್ತರಿಗೆ ಆರ್ಥಿಕ ನೆರವು ನೀಡಲು 10 ಲಕ್ಷ ರೂ. ಮೀಸಲಿಡಲು ಸರ್ವಾನುಮತದಿಂದ ಅನುಮೋದನೆ ದೊರೆತಿದೆ ಎಂದರು.
ಶಾಸಕ ನೆಹರು ಓಲೇಕಾರ, ನಗರಸಭೆ ಉಪಾಧ್ಯಕ್ಷೆ ಜಾಹೀದಾಬಾನು ಜಮಾದಾರ, ಪೌರಾಯುಕ್ತ ಪರಶುರಾಮ ಛಲವಾದಿ ಸೇರಿ ನಗರಸಭೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
ಕೇಂದ್ರ ಹಣಕಾಸು ಆಯೋಗದ 15ನೇ ಹಣಕಾಸು ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 2 ಕೋಟಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಲ್ಲದೆ, ಡೇ-ನಲ್ಮ ಯೋಜನೆಯಡಿ 35 ಲಕ್ಷ ರೂ., ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 20 ಲಕ್ಷ ರೂ. ವಿಶೇಷ ಅನುದಾನ ನಿರೀಕ್ಷಿಸಲಾಗಿದೆ. | ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷ