ಜಿಲ್ಲೆ

15ರೊಳಗೆ ಫ್ಯಾಕ್ಸ್‌ಗಳ ಗಣಕೀಕರಣ ಪೂರ್ಣಗೊಳಿಸಿ

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ 188 ಫ್ಯಾಕ್ಸ್‌ಗಳಲ್ಲಿ ಪಾರದರ್ಶಕ ಆಡಳಿತಕ್ಕಾಗಿ ಜಾರಿಗೊಳಿಸಿರುವ ಗಣಕೀಕರಣ ವ್ಯವಸ್ಥೆಯನ್ನು ಆ.15ರೊಳಗೆ ಪೂರ್ಣಗೊಳಿಸಬೇಕು ಎಂದು ಡಿಸಿಸಿ ಬ್ಯಾಂಕ್ ಹಾಗೂ ಫ್ಯಾಕ್ಸ್ ಸಿಬ್ಬಂದಿಗೆ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸೂಚಿಸಿದರು.

ನಗರದ ಡಿಸಿಸಿ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಫ್ಯಾಕ್ಸ್‌ಗಳ ಗಣಕೀಕರಣದ ಅನುಷ್ಠಾನದ ಅಂತಿಮ ಹಂತದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಇಡೀ ದೇಶದಲ್ಲಿ ಮೊದಲ ಬಾರಿಗೆ ಫ್ಯಾಕ್ಸ್‌ಗಳಲ್ಲಿ ಗಣಕೀಕರಣ ವ್ಯವಸ್ಥೆ ಜಾರಿಗೆ ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕ್‌ನಿಂದ ಸಹಕಾರ ದೊರೆತಿದೆ. ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ ನನ್ನ ವಿರುದ್ಧ ಹಾಗೂ ಬ್ಯಾಂಕ್ ಬಗ್ಗೆ ಅನಗತ್ಯ ಆರೋಪ ಮಾಡುತ್ತಿರುವವರಿಗೆ ಉತ್ತರ ಸಿಗಲಿದೆ ಎಂದರು.

ಈಗಾಗಲೆ ಎರಡೂ ಜಿಲ್ಲೆಯ 122 ಫ್ಯಾಕ್ಸ್‌ಗಳಲ್ಲಿ ಗಣಕೀಕರಣ ಕಾರ್ಯ ಅಂತಿಮ ಘಟ್ಟ ತಲುಪಿದೆ. ಸೊಸೈಟಿಗಳ ಗಣಕೀಕರಣ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ವಿ-ಸಾಫ್ಟ್ ಸಿಬ್ಬಂದಿ ಹಾಗೂ ಈ ಸಂಬಂಧ ಬ್ಯಾಂಕಿನ ಪ್ರತಿ ಶಾಖೆಗೂ ನೇಮಿಸಿರುವ ನೋಡಲ್ ಅಧಿಕಾರಿಗಳು ಉಳಿದ ಫ್ಯಾಕ್ಸ್‌ಗಳಲ್ಲಿ ಆ.15ರೊಳಗೆ ಪೂರ್ಣಗೊಳಿಸಿದಲ್ಲಿ ಸಿಬ್ಬಂದಿಗೆ ಅತ್ಯಮೂಲ್ಯ ಉಡುಗೊರೆ ನೀಡುವೆ, ಒಂದು ವೇಳೆ ಸಿಬ್ಬಂದಿ ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನಗೊಳಿಸದಿದ್ದಲ್ಲಿ ಅಂತಹವರ ವೇತನ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಕೋಲಾರ ಡಿಸಿಸಿ ಬ್ಯಾಂಕ್‌ಗೆ ನಬಾರ್ಡ್‌ನಿಂದ ಮಂಜೂರಾದ ಗಣಕೀಕರಣ ವ್ಯವಸ್ಥೆ ಬಗ್ಗೆ ಜಾಗೃತರಾಗಿರುವ ತುಮಕೂರು, ಮೈಸೂರು, ಮಂಡ್ಯ, ಶಿವಮೊಗ್ಗ ಇನ್ನಿತರ ಜಿಲ್ಲೆಯ ಡಿಸಿಸಿ ಬ್ಯಾಂಕ್‌ನ ಆಡಳಿತ ವರ್ಗ ತಮಗೂ ಗಣಕೀಕರಣ ವ್ಯವಸ್ಥೆ ಜಾರಿಗೊಳಿಸುವಂತೆ ಮನವಿ ಮಾಡಿದ್ದಾರೆ. ನಮ್ಮ ಎರಡೂ ಜಿಲ್ಲೆಯಲ್ಲಿ ಯೋಜನೆ ಸಫಲಗೊಂಡಲ್ಲಿ ನಾನೇ ಖುದ್ದು ನಿಂತು ರಾಜ್ಯದ 20 ಡಿಸಿಸಿ ಬ್ಯಾಂಕ್‌ಗಳಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಗಣಕೀಕರಣದ ಯೋಜನೆ ಯಶಸ್ವಿಗಾಗಿ ವಿ.ಸಾಫ್ಟ್ ಸಂಸ್ಥೆಯು ಸಿಬ್ಬಂದಿಗೆ ತರಬೇತಿ ಜತೆಗೆ ಹೊಸ ಸಾಫ್ಟ್‌ವೇರ್ ಆವಿಷ್ಕರಿಸಿ ನೀಡಿದೆ. ಇದರಿಂದ ದೈನಂದಿನ ವ್ಯವಹಾರಗಳನ್ನು ಕ್ರಮಬದ್ಧವಾಗಿ ದಾಖಲಿಸಲು ಅನುಕೂಲವಾಗಲಿದೆ. ಯಾವುದೇ ಸಂದರ್ಭದಲ್ಲಿ ಲೆಕ್ಕ ಪರಿಶೋಧನೆ ನಡೆದರೂ ಕ್ಷಣಾರ್ಧದಲ್ಲಿ ಮಾಹಿತಿ ನೀಡಬಹುದು ಎಂದು ಸಿಬ್ಬಂದಿಗೆ ಅರಿವು ಮೂಡಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಂತರೆಡ್ಡಿ, ಎಇಜಿಎಂಗಳಾದ ಶಿವಕುಮಾರ್, ಖಲೀಂ ಉಲ್ಲಾ, ಅಧಿಕಾರಿಗಳಾದ ಶುಭಾ, ಬ್ಯಾಂಕಿನ ವಿವಿಧ ಶಾಖೆಗಳ ಫ್ಯಾಕ್ಸ್ ಗಣಕೀಕರಣ ನೋಡಲ್ ಅಧಿಕಾರಿಗಳಾದ ಜಬ್ಬಾರ್, ಸರಸ್ವತಿ ಬ್ಯಾಡ್ಗಿ, ವೆಂಕಟೇಶ್, ಶೋಭಾಬಾಯಿ, ಜಗದೀಶ್, ನವೀನ್, ಸಂತೋಷ್, ಶ್ರೀನಾಥ್, ಮಧುಸೂದನ್, ಅಸ್ಲಾಂ, ಆಂಜಯೇಯ, ವಿ-ಸಾಫ್ಟ್ ಕಂಪನಿಯ ಸಿರೀಶ್ ಇತರರಿದ್ದರು.

ಬ್ಯಾಂಕ್ ಸಾಧನೆಗೆ ಮೆಚ್ಚಿ ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕ್ ಎಲ್ಲ ಹೊಸ ಯೋಜನೆಗಳನ್ನು ಮೊದಲಿಗೆ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ಗೆ ನೀಡುತ್ತಿದ್ದಾರೆ. ಸಿಬ್ಬಂದಿ ಶ್ರದ್ಧೆಯಿಂದ ಕೆಲಸ ಮಾಡದಿದ್ದರೆ ಮುಂದೆ ಯಾವುದೇ ಸವಲತ್ತು ಸಿಗಲಾರದು. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ