ಹಾಸನ : ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಮಕ್ಕಳ ಸಾಹಿತ್ಯ ಪರಿಷತ್, ರಂಗ ಹೃದಯ ಹಾಸನ ಹಾಗೂ ಸಂಸ್ಕೃತಿ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 15ರಿಂದ 30ರವರೆಗೂ 15 ದಿನಗಳ ಕಾಲ ‘ಕುಣಿಯೋಣು ಬಾರ’ ಎಂಬ ಮಕ್ಕಳ ರಂಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಪ್ರತಿ ಮಕ್ಕಳಿಗೆ 2 ಸಾವಿರ ರೂಪಾಯಿ ಪಾವತಿಸಬೇಕು ಎಂದು ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ತಿಳಿಸಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಹಾಸನಾಂಬ ಕಲಾಕ್ಷೇತ್ರದಲ್ಲಿ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ 7 ರಿಂದ 14 ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ. ನುರಿತ ರಂಗ ಕಲಾವಿದರಿಂದ ಮಕ್ಕಳಿಗೆ ತರಬೇತಿ ನೀಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
15 ದಿನದ ಶಿಬಿರದಲ್ಲಿ ಮುಖ್ಯವಾಗಿ ದೇಸಿ ಆಟಗಳು, ರಂಗಗೀತೆಗಳು, ಜನಪದ ಗೀತೆಗಳು, ನೃತ್ಯ, ಚಿತ್ರಕಲೆ, ಪ್ರಸಾದನ, ಮ್ಯಾಜಿಕ್, ಮುಖವಾಡ ತಯಾರಿಕೆ, ಮಕ್ಕಳ ಸಿನಿಮಾ ಪ್ರದರ್ಶನ, ಟ್ರಕ್ಕಿಂಗ್, ಸ್ಥಳ ವೀಕ್ಷಣೆ, ಸಂತೆ, ಸಾಹಸ ಕಲೆಗಳು, ವ್ಯಕ್ತಿತ್ವ ವಿಕಸನ, ನಾಟಕ ಕಲಿಕೆ ಮತ್ತು ಪ್ರದರ್ಶನ ಹಾಗೂ ಇತರೆ ತರಗತಿಗಳು ನಡೆಯಲಿದೆ. ಹಳೆ ಕಾಲದ ಕ್ರೀಡಾ ಚಟುವಟಿಕೆಗಳನ್ನು ನೆನಪಿಸುವ ನಿಟ್ಟಿನಲ್ಲಿ, ಗೋಲಿ, ಚಿನ್ನಿ-ದಾಂಡು , ಕುಂಟೆ ಪಿಲ್ಲೆ ಸೇರಿದಂತೆ ವಿವಿಧ ಕ್ರೀಡೆಗಳನ್ನು ಶಿಬಿರದಲ್ಲಿ ನಡೆಸಲಾಗುವುದು. ಹಾಲು ಉತ್ಪಾದನಾ ಕೇಂದ್ರಕ್ಕೆ ಭೇಟಿ, ಕೃಷಿ ಮಾಡುವ ಸ್ಥಳಕ್ಕೆ ಮಕ್ಕಳನ್ನು ಕರೆದೊಯ್ದು ಕೃಷಿ ಪದ್ಧತಿ ಹಾಗೂ ಉತ್ಪನ್ನಗಳ ಬಗ್ಗೆ ಪರಿಚಯಿಸುವ ಕೆಲಸವನ್ನು ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರಂಗತಜ್ಞ ಪ್ರದೀಪ್ ಮಾತನಾಡಿ, ನಮ್ಮ ಈ ಶಿಬಿರಕ್ಕೆ ಸರಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಹೀಗಾಗಿ ಪ್ರತಿ ಮಕ್ಕಳಿಗೆ 2 ಸಾವಿರ ಶುಲ್ಕ ಮಾಡಲಾಗಿದೆ. ಮಕ್ಕಳಲ್ಲಿ ರಂಗ ಕಲೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿಬಿರಕ್ಕೆ ಬೆಂಗಳೂರು, ಮೈಸೂರು ಇತರೆ ಭಾಗಗಳಿಂದ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ಉಪನ್ಯಾಸ ನೀಡಲಿದ್ದಾರೆ. ಒಟ್ಟು 50 ರಿಂದ 60 ಮಕ್ಕಳು ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ, ರಘುನಂದನ್ ಕಲಾವಿದರಾದ ಪೂಜಾ ರಘುನಂದನ್, ವೇದ ಶಿವಕುಮಾರ್, ಕಲಾವಿದ ಗುರುರಾಜ್ ಇತರರು ಉಪಸ್ಥಿತರಿದ್ದರು.