ಹನೂರು: ಶೈಕ್ಷಣಿಕ ವಲಯದ ಬಸಪ್ಪನದೊಡ್ಡಿ ಉನ್ನತೀಕರಿಸಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿ.ವೀರಪ್ಪ ಅವರು ಉಘೇ ಮಾದಪ್ಪ ಶೀರ್ಷಿಕೆಯಡಿ ಶ್ರೀ ಮಲೆಮಹದೇಶ್ವರ ಬೆಟ್ಟದ ಮಾಹಿತಿಯನ್ನು ಒಳಗೊಂಡ ಸ್ಥಳ ಪುರಾಣ ಪುಸ್ತಕವನ್ನು ಹೊರತಂದಿದ್ದು, ಸೆ.15 ರಂದು ಸಾಲೂರು ಬೃಹನ್ಮಠದಲ್ಲಿ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಿಡುಗಡೆಯಾಗಲಿದೆ.
ತಾಲೂಕಿನ ಶಾಗ್ಯ ಗ್ರಾಮದ ಶಿವರುದ್ರಮ್ಮ ಮತ್ತು ವಿರೂಪಾಕ್ಷಪ್ಪ ದಂಪತಿ ಪುತ್ರರಾದ ವಿ.ವೀರಪ್ಪ 1970ರಲ್ಲಿ ಜನಿಸಿದರು. ಮಲೆಮಹದೇಶ್ವರ ಬೆಟ್ಟದಲ್ಲಿ ವಾಸವಾಗಿದ್ದಾರೆ. ಪ್ರಾಥಮಿಕ ಶಾಲೆಯಿಂದ ಪ್ರೌಢ ಶಿಕ್ಷಣದವರೆಗೂ ಸಾಲೂರು ಮಠದ ಶ್ರೀ ಮಹದೇಶ್ವರ ಶಾಲೆಯಲ್ಲೇ ಕಲಿತರು. ಮೈಸೂರಿನಲ್ಲಿ ಟಿಸಿಎಚ್ ತರಬೇತಿ ಪಡೆದು 1992ರಲ್ಲಿ ಶಿಕ್ಷಕ ವೃತ್ತಿ ಸೇವೆಗೆ ಸೇರಿದರು. ಕರ್ನಾಟಕ ಗಡಿ ಗ್ರಾಮ ಗೋಪಿನಾಥಂ ಸರ್ಕಾರಿ ಹಿರಿಯ ಶಾಲೆಯಲ್ಲಿ 6 ವರ್ಷ, ಆಣೆಹೊಲ ಶಾಲೆಯಲ್ಲಿ 6 ವರ್ಷ, ಗೊರಸಾಣೆ ಸ.ಕಿ.ಪ್ರಾ ಶಾಲೆಯಲ್ಲಿ 14 ವರ್ಷ ಶಿಕ್ಷಕರಾಗಿ ಹಾಗೂ ತುಳಸಿಕೆರೆ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ 2 ವರ್ಷ, ಮೆದಗನಾಣೆ ಶಾಲೆಯಲ್ಲಿ 1 ವರ್ಷ ಸೇವೆ ಸಲ್ಲಿಸಿದ್ದಾರೆ.
ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದ ಬಳಿಕ ಮತ್ತೆ ಗೋಪಿನಾಥಂ ಸ.ಹಿ.ಪ್ರಾ. ಶಾಲೆಯಲ್ಲಿ 4 ವರ್ಷ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ ಬಸಪ್ಪನ ದೊಡ್ಡಿ ಶಾಲೆಯಲ್ಲಿ ಕಳೆದ 2 ವರ್ಷದಿಂದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕಿನ ಮ.ಬೆಟ್ಟದ ಭಾಗದ ಗುಡ್ಡಗಾಡು ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಿ 32 ವರ್ಷ ಸೇವೆ ಸಲ್ಲಿಸಿದ ಇವರ ಸೇವಾ ಕಾರ್ಯವನ್ನು ಗುರುತಿಸಿ 2023ರಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಕೆ.ಪಿ.ಚಿಕ್ಕವೀರಯ್ಯ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶ್ರೀ ಮಹದೇಶ್ವರ ಬೆಟ್ಟ 144 ಪುಟಗಳ ಶ್ರೀ ಕ್ಷೇತ್ರದ ಸ್ಥಳ ಪುರಾಣದ ಮಾಹಿತಿಯನ್ನು ಬಿಂಬಿಸುವ ಪುಸ್ತಕವನ್ನು ಹೊರ ತಂದಿರುವುದು ಭಕ್ತರು ಹಾಗೂ ಜನರಿಗೆ ಉತ್ತಮ ಮಾಹಿತಿಯುಳ್ಳ ಪುಸ್ತಕವಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
22 ಪುಟಗಳಲ್ಲಿ ವರ್ಣರಂಜಿತ ಚಿತ್ರಗಳು: ಮಲೆಮಹದೇಶ್ವರ ಬೆಟ್ಟದ ಮಾಹಿತಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ರಚನೆ, ಮಾದಪ್ಪನ ಸನ್ನಿಧಿಯ ವಾಸ್ತವಿಕತೆ, ಪೌರಾಣಿಕ ಹಿನ್ನೆಲೆ, ಮರಿದೇವರ ಜನನ ಮತ್ತು ಬೆಳವಣಿಗೆ, ಶ್ರೀ ಸಾಲೂರು ಬೃಹನ್ಮಠ, ಶ್ರೀ ಕ್ಷೇತ್ರದಲ್ಲಿ ಜರುಗುವ ಹರಕೆ ಮತ್ತು ಸೇವೆಗಳು, ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು, ವಸತಿ ಗೃಹಗಳ ಮಾಹಿತಿ, ಶ್ರೀ ಕ್ಷೇತ್ರದಲ್ಲಿ ಪೂಜನೀಯ ಸ್ಥಳಗಳು, ಆಲಂಬಾಡಿ ಗ್ರಾಮದ ಹಿನ್ನೆಲೆ, ಹೊಗೇನಕಲ್ ಜಲಪಾತ, ಪರಂಪರೆಯ ದೇವರ ಗುಡ್ಡರು, ಶ್ರೀ ಮಹದೇಶ್ವರರು ಸಂಚರಿಸಿದ ಎಪ್ಪತ್ತೇಳು ಮಲೆಗಳ ಸಂಪೂರ್ಣ ಮಾಹಿತಿಯಲ್ಲಿ ಒಳಗೊಂಡಿದೆ. ಜನಪದ ಗೀತೆಗಳು, ಕಂಸಾಳೆ ಹಾಡುಗಳನ್ನು ತಿಳಿಸಲಾಗಿದೆ. ದೇಗುಲದ ಒಳಾಂಗಣ, ಹೊರಾಂಗಣ, ಶಿವ ಪಾರ್ವತಿಯ ಉತ್ಸವ ಮೂರ್ತಿ, ಅನ್ನ ಬ್ರಹ್ಮೋತ್ಸವ, ಗುರು ಬ್ರಹ್ಮೋತ್ಸವ, ಮಾದಪ್ಪನ ತಪ್ಪಲಿನ ದೇಗುಲಗಳು, ಮ.ಬೆಟ್ಟಕ್ಕೆ ಮೈಸೂರು ಮಹಾರಾಜರು ಭೇಟಿ ನೀಡಿ ಸಂದರ್ಭ, ಮೈಸೂರು ಮಹಾರಾಜರು ನೀಡಿದ ಕೊಡುಗೆಗಳ ಉಪಯುಕ್ತ ಮಾಹಿತಿಯ ಪುಸ್ತಕವಾಗಿದೆ.