ಜಿಲ್ಲೆ

15ರಂದು ಯೂಸ್‌ಲೆಸ್ ಫೆಲೋ ಕನ್ನಡ ಸಿನಿಮಾ ಬಿಡುಗಡೆ

Hassan - Mohan Kanthur

ಹಾಸನ: ರಾಜರತ್ನ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣದ ಕುಟುಂಬ ಸಮೇತ ಕುಳಿತು ನೋಡಬಹುದಾದ ‘ಯೂಸ್‌ಲೆಸ್ ಫೆಲೋ’ ಕನ್ನಡ ಚಲನಚಿತ್ರವು ಡಿ.15ರಂದು ರಾಜ್ಯಾದ್ಯಂತ 72 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಲನಚಿತ್ರದ ನಾಯಕ ನಟ ಮತ್ತು ನಿರ್ದೇಶಕ ಯು.ಬಿ. ಮನು ತಿಳಿಸಿದರು.
ಯೂಸ್‌ಲೆಸ್ ಫೆಲೋ ಚಿತ್ರವು ನನ್ನ ನಾಲ್ಕನೇ ಸಿನಿಮಾವಾಗಿದ್ದು, ಇದಕ್ಕೂ ಮೊದಲು ಮೋಜೂ, ನಾನು ನನ್ ಜಾನು ಚಿತ್ರಗಳಲ್ಲಿ ನಾಯಕನಟನಾಗಿ ನಟಿಸಿದ್ದೇನೆ. ಯೂಸ್‌ಲೆಸ್ ಫೆಲೋ ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿಯನ್ನೂ ನಾನೇ ನಿರ್ವಹಿಸಿದ್ದೇನೆ. ಪ್ರೀತಿ ಮತ್ತು ಸಾಹಸದ ಕಥಾ ಹಂದರದ ಜತೆಗೆ ಚಿತ್ರವು ಸ್ಫೂರ್ತಿದಾಯಕವೂ ಆಗಿದೆ. ನಾಯಕ ನಟ ತನ್ನ ಜೀವನದಲ್ಲಿ ಯೂಸ್‌ಲೆಸ್ ಫೆಲೋ ಹಂತವನ್ನು ಹೇಗೆ ಮೆಟ್ಟಿ ನಿಲ್ಲುತ್ತಾನೆ ಹಾಗೂ ಅದಕ್ಕೆ ಎದುರಾಗುವ ಕಷ್ಟ-ಕಾರ್ಪಣ್ಯಗಳು ಇವುಗಳೆಲ್ಲವುದರ ಮಿಶ್ರಣವೇ ಯೂಸ್‌ಲೆಸ್ ಫೆಲೋ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಚಿತ್ರದಲ್ಲಿ ದಿವ್ಯಾ ಗೌಡ, ವಿಜಯ್ ಸೂರ್ಯ, ವಿನೋದ್ ಗೊಬ್ಬರಗಾಲ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಜೆ.ಕೆ. ಮೈಸೂರು ಹಾಗೂ ಥ್ರಿಲ್ಲರ್ ಮಂಜು, ಅಪ್ಪು ವೆಂಕಟೇಶ್ ಸಾಹಸ ಸಂಯೋಜನೆ ಮಾಡಿದ್ದಾರೆ. ರತ್ನ ಬಸವರಾಜು ನಿರ್ಮಾಣ ಮಾಡಿದ್ದು, ರಾಜರತ್ನ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಹೊರಬರುತ್ತಿದೆ. ಶ್ಯಾಮ್ ಸಿಂಧನೂರ್ ಛಾಯಾಗ್ರಹಣ, ಶಿವಪ್ರಸಾದ್ ಸಂಗೀತ, ವಿಜಯ್ ಸಿಂದಿಗಿ ಸಂಕಲನ ಚಿತ್ರಕ್ಕಿದೆ. ಇನ್ನು ಸಿನಿಮಾದಲ್ಲಿ ಒಟ್ಟು 5 ಹಾಡುಗಳಿದ್ದು, ಹಾಸನ, ಹುಬ್ಬಳ್ಳಿ, ಬೆಂಗಳೂರು, ಸಕಲೇಶಪುರ, ಮಂಗಳೂರು ಹಾಗು ವಿವಿಧ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಹಾಸನದ ಮಲೆನಾಡು ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ತಾಲೂಕಿನ ಮಗ್ಗೆಯಲ್ಲಿ ಕೆಲ ಸನ್ನಿವೇಶವನ್ನು ಚಿತ್ರಿಕರಿಸಲಾಗಿದೆ. ಚಲನಚಿತ್ರವು ಇದೇ ಡಿಸೆಂಬರ್ 15ಕ್ಕೆ ಬಿಡುಗಡೆಗೆ ಸಜ್ಜಾಗಿದೆ. ಹಾಸನ ನಗರದ ಪಿಕ್ಚರ್ ಪ್ಯಾಲೇಸ್‌ನಲ್ಲಿ ಚಲನಚಿತ್ರ ಬಿಡುಗಡೆಯಾಗಲಿದ್ದು, ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಬಸವ ಕೇಂದ್ರದ ಅಧ್ಯಕ್ಷರು ಹಾಗೂ ನಾಯಕ ನಟ ಮನು ತಂದೆ ಯು.ಎಸ್. ಬಸವರಾಜು, ಶ್ರೀ ಬಸವ ರಾಜೇಂದ್ರ ಶಾಲೆಯ ನಿವೃತ್ತ ಶಿಕ್ಷಕ ಯು.ಎಸ್, ಲೋಕೇಶ್, ವೀರಶೈವ ಸಮಾಜದ ಮುಖಂಡರಾದ ಟಿ.ಪಿ. ನಾಗರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಇತರರು ಉಪಸ್ಥಿತರಿದ್ದರು.