ಗುಂಡ್ಲುಪೇಟೆ: ತಾಲೂಕಿನ ನಿಟ್ರೆ ಗ್ರಾಮದಲ್ಲಿ ಅ.15ರಂದು ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ ನಿಗದಿಯಾಗಿದ್ದು, ಇನ್ನಾದರೂ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಈ ಭಾಗದ ಜನರು ನಿರೀಕ್ಷೆಯಲ್ಲಿದ್ದಾರೆ.
ದಿಢೀರ್ ಗ್ರಾಮವಾಸ್ತವ್ಯ ನಿಗದಿಯಾಗಿದ್ದರಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಮನೆ ಮನೆಗಳಿಗೆ ತೆರಳಿ ಕರಪತ್ರ ಹಂಚುವ ಜತೆಗೆ ಕುಂದುಕೊರತೆಗಳ ಮಾಹಿತಿಗಳ ಜತೆಗೆ ಅರ್ಜಿಗಳನ್ನು ಸ್ವೀಕರಿಸುತ್ತಿದ್ದಾರೆ. ಹೀಗಾಗಿ, ತಮ್ಮ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ದೊರಕುತ್ತವೆಯೇ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.
ಬೇಗೂರು ಹೋಬಳಿಯ ದೊಡ್ಡ ಗ್ರಾಮವಾದ ನಿಟ್ರೆ ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ. ಇದರ ವ್ಯಾಪ್ತಿಗೆ ಹಾಲಹಳ್ಳಿ, ಕಮರಹಳ್ಳಿ, ರಂಗನಾಥಪುರ, ತೊರವಳ್ಳಿ ಸೇರಿವೆ. ಆದರೆ ರಂಗನಾಥಪುರದಲ್ಲಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಿದ್ದರೂ ಸಮರ್ಪಕ ಸಾರಿಗೆ ಸಂಪರ್ಕದ ಕೊರತೆಯಿಂದ ಬೇಗೂರಿಗೆ ಹೋಗಬೇಕಾಗಿದೆ. ಅಲ್ಲದೆ ಸಮಯಕ್ಕೆ ಸಾರಿಗೆ ಬಸ್ಸುಗಳು ಇಲ್ಲದ ಪರಿಣಾಮ ಆಟೋಗಳನ್ನೇ ಅವಲಂಬಿಸುವಂತಾಗಿದೆ.
ಒಕ್ಕಣೆ ಕಣದ ಕೊರತೆಯಿಂದ ಪ್ರತಿ ವರ್ಷವೂ ಕಟಾವು ಮಾಡಿದ ಬೆಳೆಗಳನ್ನು ರಸ್ತೆಯಲ್ಲಿ ಹರಡಿ ಒಕ್ಕಣೆ ಮಾಡಲಾಗುತ್ತಿದ್ದು, ರೈತರು ಹಾಗೂ ವಾಹನಗಳ ಸವಾರರಿಗೂ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಕಣಗಳನ್ನು ನಿರ್ಮಿಸಿದರೆ ರೈತಾಪಿ ಜನರಿಗೆ ಅನುಕೂಲವಾಗಲಿದೆ. ಗ್ರಾಮದ ಬಸ್ ನಿಲ್ದಾಣ ಮತ್ತು ಶಾಲೆಯ ಸಮೀಪ ಎರಡು ಕಟ್ಟೆಗಳಲ್ಲಿ ನೀರು ತುಂಬಿದ್ದು, ಮಕ್ಕಳ ಪಾಲಿಗೆ ಅಪಾಯಕಾರಿಯಾಗಿವೆ. ಆದ್ದರಿಂದ ಇವುಗಳ ಸುತ್ತಲೂ ತಂತಿಬೇಲಿ ನಿರ್ಮಿಸಲು ಕ್ರಮಕೈಗೊಳ್ಳಬೇಕು. ಎಲ್ಲ ಬಡಾವಣೆಗಳಿಗೂ ಸಿಸಿ ರಸ್ತೆ ನಿರ್ಮಿಸಬೇಕು. ಕಳೆದ ನಾಲ್ಕಾರು ವರ್ಷಗಳಿಂದ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ಮಂಜೂರು ಮಾಡದಿರುವುದು ಹಾಗೂ ಹಳೆಯ ಫಲಾನುಭವಿಗಳಿಗೆ ಬಿಲ್ ನೀಡದ ಪರಿಣಾಮ ಬಹುತೇಕ ಬಡವರು ಇನ್ನೂ ಗುಡಿಸಲಲ್ಲೇ ವಾಸಿಸುವಂತಾಗಿದೆ. ಬೆಲೆ ಏರಿಕೆಯಿಂದ ಬಿಲ್ ಮಾಡಿಕೊಟ್ಟರೂ ಪೂರ್ಣಗೊಳಿಸಲಾಗದ ಪರಿಸ್ಥಿತಿಗೆ ಸಿಲುಕಿದ್ದಾರೆ. ಆದ್ದರಿಂದ ಹೆಚ್ಚುವರಿ ಬಿಲ್ ಮಾಡಬೇಕಿದೆ.