ಪಾಂಡವಪುರ: ತಾಲೂಕಿಗೆ ಡಿ.24ರಂದು ಪಂಚರತ್ನ ರಥಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಡಿ.15ರಂದು ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆ ಹಾಗೂ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪುನೀತೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಪುನೀತ್ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ತಾಲೂಕಿನ ಚಿನಕುರಳಿಯಲ್ಲಿ 14 ಕೋಟಿ ರೂ. ವೆಚ್ಚದಲ್ಲಿ 66/11 ಕೆವಿ ಎಕ್ಸ್‌ಪ್ರೆಸ್ ವಿದ್ಯುತ್ ಫೀಡರ್ ಘಟಕಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಇಂಧನ ಸಚಿವ ಸುನೀಲ್‌ಕುಮಾರ್ ಸಹಕಾರದಿಂದಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 5 ವಿದ್ಯುತ್ ಉಪಕೇಂದ್ರ ಮಂಜೂರಾಗಿದೆ. ಈ ಪೈಕಿ ಹಟ್ನ, ಸುಂಕಾತೊಣ್ಣೂರು ಮತ್ತು ನಾರಾಯಣಪುರದ ಉಪಕೇಂದ್ರಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಬೇಬಿ ಹಾಗೂ ಕ್ಯಾತನಹಳ್ಳಿಗೆ ಮಂಜೂರಾಗಿರುವ ಕೇಂದ್ರಳಿಗೆ ಟೆಂಡರ್ ಮುಗಿದ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು. ಈ ಎಲ್ಲ ಕಾಮಗಾರಿಗಳು ಪೂರ್ಣಗೊಂಡರೆ 25 ವರ್ಷ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ಎದುರಾಗು ವುದಿಲ್ಲ ಎಂದು ತಿಳಿಸಿದರು.
ಡಿ.24ರಂದು ಕೆಆರ್‌ಎಸ್ ಮೂಲಕ ತಾಲೂಕಿಗೆ ಆಗಮಿಸುತ್ತಿರುವ ಪಂಚರತ್ನ ರಥಯಾತ್ರೆ ತಾಲೂಕಿನ ಕಟ್ಟೇರಿ, ಅರಳಕುಪ್ಪೆ, ಹರವು, ಎಲೆಕೆರೆ, ಹಾರೋಹಳ್ಳಿ ಮಾರ್ಗವಾಗಿ ಪಟ್ಟಣ ಪ್ರವೇಶಿಸುತ್ತದೆ. ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ವಿವರಿಸಿದರು.
ಸೆಸ್ಕ್ ಎಇಇಗಳಾದ ವಿ.ಪುಟ್ಟಸ್ವಾಮಿ, ಕಿಶೋರ್, ಸೈಫ್‌ವುಲ್ಲಾ, ತಾಪಂ ಮಾಜಿ ಸದಸ್ಯ ಗೋಪಾಲೇಗೌಡ, ಗ್ರಾಪಂ ಅಧ್ಯಕ್ಷ ವಿ.ಎಸ್.ಪುಟ್ಟಸ್ವಾಮಿ(ಪಾಪಣ್ಣ), ಸದಸ್ಯ ಸಿ.ಎ.ಲೋಕೇಶ್, ಮಾಜಿ ಸದಸ್ಯ ಮೈಕ್ ಮಹದೇವು, ವಿಎಸ್‌ಎಸ್‌ಎನ್ ಅಧ್ಯಕ್ಷ ಮೊಗ್ಗಣ್ಣಗೌಡ, ಇತರರು ಇದ್ದರು.