ಚಿಕ್ಕಬಳ್ಳಾಪುರ: ಜಿಲ್ಲೆಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಪ್ರಸಕ್ತ 2024-25ನೇ ಸಾಲಿನಲ್ಲಿ 149.87 ಕೋಟಿ ರೂ. ಗುರಿಗೆ ಬದಲಾಗಿ 157 ಕೋಟಿ ರೂ. ರಾಜಸ್ವ ಸಂಗ್ರಹವಾಗಿದ್ದು, ಶೇ.104 ಸಾಧನೆಯಾಗಿದೆ.
ರಾಜಧಾನಿ ಬೆಂಗಳೂರಿಗೆ ಸಮೀಪ, ಹಾಗೆಯೇ ನೆರೆಯ ರಾಜ್ಯ ಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಹೊಸ ಬಡಾವಣೆಗಳು ನಿರ್ಮಾಣವಾಗಿ, ಕಟ್ಟಡಗಳು ತಲೆ ಎತ್ತುತ್ತಿವೆ. ಇದರ ವೇಗಕ್ಕೆ ಅನುಗುಣವಾಗಿ ಜಮೀನು, ನಿವೇಶನ ಮತ್ತು ಕಟ್ಟಡಗಳಿಗೆ ಹೆಚ್ಚಿನ ಬೆಲೆ ಬಂದಿದೆ. ಉತ್ತಮ ವಹಿವಾಟಿನಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೂ ಒಳ್ಳೆಯ ಆದಾಯ ಸಿಗುತ್ತಿದೆ.
2023-24ನೇ ಸಾಲಿನಲ್ಲಿ 167 ಕೋಟಿ ರೂ.ಗಳ ಗುರಿಗೆ 195 ಕೋಟಿ ರೂ. ರಾಜಸ್ವ ಸಂಗ್ರಹವಾಗಿ ಶೇ.116 ಸಾಧನೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ 149.87 ಕೋಟಿ ರೂ. ಗುರಿಗೆ ಬದಲಾಗಿ 157 ಕೋಟಿ ರೂ ಸಂಗ್ರಹವಾಗಿದೆ. ಬಜೆಟ್ ವರ್ಷ ಮುಗಿಯುವುದರೊಂದಿಗೆ ಮತ್ತಷ್ಟು ಆದಾಯ (242 ಕೋಟಿ ರೂ.) ನಿರೀಕ್ಷಿಸಲಾಗಿದೆ.
ತಿಂಗಳುವಾರು ಸಾಧನೆ: ನೋಂದಣಿ ಇಲಾಖೆಯಲ್ಲಿ ಪ್ರತಿ ತಿಂಗಳು ಆದಾಯ ಹೆಚ್ಚಾಗುತ್ತಿದೆ. ಮುದ್ರಾಂಕ, ನೋಂದಣಿ ಮತ್ತು ಸ್ಕ್ಯಾನಿಂಗ್ ಸೇರಿ ವಿವಿಧ ಶುಲ್ಕಗಳ ರೂಪದಲ್ಲಿ ಕೋಟ್ಯಂತರ ರೂ. ಸಂಗ್ರಹವಾಗುತ್ತಿದೆ. ಆಗಸ್ಟ್‌ನಲ್ಲಿ 22.42 ಕೋಟಿ ರೂ. ಗುರಿಗೆ 24.97 ಕೋಟಿ ರೂ., ಸೆಪ್ಟೆಂಬರ್‌ನಲ್ಲಿ 24.53 ಕೋಟಿ ರೂ. ಗುರಿಗೆ 21.20 ಕೋಟಿ ರೂ., ಅಕ್ಟೋಬರ್‌ನಲ್ಲಿ 22.17 ಕೋಟಿ ರೂ.ಗಳಿಗೆ 20.63 ಕೋಟಿ ರೂ. ಸಂಗ್ರಹವಾಗಿದೆ. ಏಪ್ರಿಲ್‌ನಿಂದ ನವೆಂಬರ್‌ವರೆಗೆ ಕನಿಷ್ಠ 14.58 ಕೋಟಿ ರೂ., ಗರಿಷ್ಠ 24.97 ಕೋಟಿ ರೂ. ಸಂಗ್ರಹವಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ವಹಿವಾಟನ್ನು ನಂಬಿಕೊಂಡು ಸ್ಟಾಂಪ್‌ವೆಂಡರ್ ಜೀವನ ನಡೆಸುತ್ತಿದ್ದು ಕಚೇರಿಯ ಆವರಣದಲ್ಲಿ ಗಣಕಯಂತ್ರ, ಮುದ್ರಣ ಯಂತ್ರವನ್ನಿಟ್ಟುಕೊಂಡು ದಾಖಲೆಗಳನ್ನು ನಿಯಮಾನುಸಾರ ತಯಾರಿಸಿಕೊಡುವ ಜತೆಗೆ ಗ್ರಾಹಕರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದಾರೆ. ಇದಕ್ಕಾಗಿ ಶುಲ್ಕವನ್ನು ಪಡೆಯಲಾಗುತ್ತದೆ. ನೇರ ವಹಿವಾಟು ವಿಳಂಬ
ನೇರ ವಹಿವಾಟು ನಡೆಸಲು ಸಾಧ್ಯವಾಗದೆ ಮಧ್ಯವರ್ತಿಗಳನ್ನು ಆವಲಂಬಿಸಬೇಕಾದ ಇಲಾಖೆಗಳ ಪೈಕಿ ನೋಂದಣಿ ಮತ್ತು ಮುದ್ರಾಂಕ ಕಚೇರಿ ಸಹ ಪ್ರಮುಖವಾದದ್ದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ, ದಾಖಲೆಗಳ ಪರಿಶೀಲನೆ, ನೋಂದಣಿ ಪ್ರಕ್ರಿಯೆಗೆ ಹೆಚ್ಚುವರಿ ಹಣ ನೀಡಬೇಕು. ಇಲ್ಲದಿದ್ದಲ್ಲಿ ತಾಂತ್ರಿಕ ಸಮಸ್ಯೆ ಕಾಡುತ್ತವೆ. ನಿಗದಿತ ಸಮಯಕ್ಕೆ ಕೆಲಸವಾಗಲ್ಲ. ಈ ಹಿಂದೆ ಚಿಕ್ಕಬಳ್ಳಾಪುರ ನೋಂದಣಿ ಕಚೇರಿಯಲ್ಲಿ ಮಧ್ಯವರ್ತಿಯೊಬ್ಬ ಹಿರಿಯ ಅಧಿಕಾರಿಯ ಮಾದರಿಯಲ್ಲಿ ಕುಳಿತುಕೊಂಡು ವ್ಯವಹರಿಸುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಹಲವು ಸುಧಾರಣಾ ಕ್ರಮ ಕೈಗೊಂಡಿದ್ದರೂ ಅವ್ಯವಹಾರ ಮಾತ್ರ ನಿಂತಿಲ್ಲ.
ರಿಯಲ್ ಎಸ್ಟೇಟ್‌ನಲ್ಲಿ ಸರ್ಕಾರದ ಲೆಕ್ಕ ಮತ್ತು ಮಾರುಕಟ್ಟೆ ಲೆಕ್ಕದಲ್ಲಿ ಪ್ರತ್ಯೇಕ ವಹಿವಾಟು ನಡೆಯುತ್ತಿದ್ದು, ಖರೀದಿದಾರರು ಮತ್ತು ಮಾರಾಟಗಾರ ನಡುವೆ ಮಧ್ಯವರ್ತಿಗಳಿಗೂ ಹೆಚ್ಚಿನ ಲಾಭ ಸಿಗುತ್ತದೆ. ಪ್ರತಿ ವ್ಯವಹಾರಕ್ಕೆ ಕನಿಷ್ಠ ಶೇ.2ರಿಂದ 4 ಕಮಿಷನ್ ಪಡೆಯಲಾಗುತ್ತಿದೆ. ನೋಂದಣಿ ಮತ್ತು ಉಪನೋಂದಣಿ ಕಚೇರಿ ಆವರಣದಲ್ಲಿ ಬಹುತೇಕ ಇಂತಹ ವಹಿವಾಟುದಾರರೇ ತುಂಬಿರುತ್ತಾರೆ. ಅರ್ಜಿದಾರರು ಮತ್ತು ಅಧಿಕಾರಿಗಳ ನಡುವೆ ಸಂಪರ್ಕ ಕೊಂಡಿಗಳಂತೆ ಕಾರ್ಯ ನಿರ್ವಹಿಸುತ್ತಿದ್ದು, ಜನರಿಂದ ಪಡೆದ ಹಣದಲ್ಲಿ ಸ್ವಲ್ಪ ಪಾಲನ್ನು ಸಿಬ್ಬಂದಿಗೆ ಕೊಟ್ಟು, ಉಳಿದ ಹಣವನ್ನಿರಿಸಿಕೊಳ್ಳುವ ಮೂಲಕ ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ.