ವಿಜಯಪುರ: ಹಾನಗಲ್ಲದ ಶ್ರೀ ಕುಮಾರ ಶಿವಯೋಗಿಗಳ 156ನೇ ಜಯಂತ್ಯುತ್ಸವವನ್ನು ಸೆ. 24 ರಿಂದ ಅ. 4ರವರೆಗೆ ಬಸವನಬಾಗೇವಾಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗುಣದಾಳದ ವಿವೇಕಾನಂದ ದೇವರು ಹಾಗೂ ಬೀಳಗಿಯ ಗುರುಪಾದೇಶ್ವರ ಶಿವಾಚಾರ್ಯರು ತಿಳಿಸಿದರು.
ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಗುರುವಾರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಯಕ, ದಾಸೋಹ ಮತ್ತು ಸಮಾನತೆ ತತ್ವಗಳ ಮೂಲಕ ಜಗತ್ತಿನ ಕಲ್ಯಾಣಕ್ಕಾಗಿ ಅಹರ್ನಿಶಿ ಶ್ರಮಿಸಿದ ವಿಶ್ವ ಗುರು ಬಸವಣ್ಣನವರು ಜನಿಸಿದ ಪಾವನ ಕ್ಷೇತ್ರ ಬಸವನಬಾಗೇವಾಡಿಯ ಶ್ರೀ ಬಸವೇಶ್ವರ ಇಂಟರ್ ನ್ಯಾಶನಲ್ ಶಾಲೆ ಆವರಣದಲ್ಲಿ ಈ ಜಯಂತ್ಯುತ್ಸವ ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ಉಪ್ಪಿನಬೆಟಗೇರಿ ಮೂರು ಸಾವಿರ ವಿರಕ್ತಮಠದ ಶ್ರೀ ಕುಮಾರ ವಿರುಪಾಕ್ಷ ಸ್ವಾಮೀಜಿಯವರಿಂದ ಮಹಾಶಿಯೋಗಿಗಳ ಕುರಿತು ಪ್ರವಚನ ನಡೆಯಲಿದೆ. ನಾಡಿನ ಮೂಲೆ ಮೂಲೆಗಳಿಂದ ಮಠಾಧೀಶರು ಆಗಮಿಸಲಿದ್ದಾರೆಂದರು.
ಸೆ. 24 ರಂದು ಸಂಜೆ 6ಕ್ಕೆ ಶಿವಯೋಗಿಗಳವರ ಜಯಂತಿಯನ್ನು ಬಸವನಬಾಗೇವಾಡಿ-ಬಿಳ್ಳೂರ ವಿರಕ್ತಮಠದ ಮುರುಘೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ ಎಂದರು.
ಹುಬ್ಬಳ್ಳಿ-ಹಾನಗಲ್ಲ ಜಗದ್ಗುರು, ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಮನಗೂಳಿಯ ಡಾ. ಮಹಾಂತಲಿಂಗ ಶಿವಾಚಾರ್ಯರು, ಮಸೂತಿಯ ಪ್ರಭುಕುಮಾರ ಶಿವಾಚಾರ್ಯರು, ಮುತ್ತಗಿಯ ರುದ್ರಮುನಿ ಶಿವಾಚಾರ್ಯರು, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು, ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯರು, ಇಂಗಳೇಶ್ವರದ ಭೃಂಗೀಶ್ವರ ಶಿವಾಚಾರ್ಯರು, ಕರಭಂಟನಾಳದ ಶಿವಕುಮಾರ ಸ್ವಾಮೀಜಿ ಸೇರಿದಂತೆ ಜಿಲ್ಲಾ ಮಠಾಧೀಶರ ಒಕ್ಕೂಟದ ಪೂಜ್ಯರು ಪಾಲ್ಗೊಳ್ಳುವರು ಎಂದವರು ವಿವರಿಸಿದರು.
ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆ ವಹಿಸುವರು. ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಸಹಕಾರಿ ಮಹಾಮಂಡಳದ ನಿರ್ದೇಶಕ ಐ.ಸಿ. ಪಟ್ಟಣಶೆಟ್ಟಿ, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಸಪ್ಪ ಪೂಜಾರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದರು.
ಈ ಅವಧಿಯಲ್ಲಿ 23 ಹಳ್ಳಿಗಳಿಗೆ ನಾನಾ ಮಠಾಧೀಶರು ಸಂಚರಿಸಿ, ಲಿಂಗ ಪೂಜೆ, ಭಸ್ಮ ಧಾರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡುವುದಾಗಿ ಉಭಯ ಶ್ರೀಗಳು ತಿಳಿಸಿದರು.
ಬಸವನಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ತಡವಲಗಾ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಆಸಂಗಿ ಹಿರೇಮಠದ ವೀರಬಸವ ದೇವರು, ಯರನಾಳದ ಪ್ರಸಾದ ದೇವರು, ಹುಣಶ್ಯಾಳದ ಆನಂದ ದೇವರು, ತೆಲಂಗಾಣದ ವಿರುಪಾಕ್ಷ ದೇವರು, ಬೆಳ್ಳುಬ್ಬಿಯ ರೇಣುಕ ದೇವರು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ದತ್ತಾತ್ರೇಯ ಹೊಸಮಠ ಮತ್ತಿತರರಿದ್ದರು. ಜಯಂತ್ಯುತ್ಸವದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.