ಜಿಲ್ಲೆ

1512 ಪ್ರಕರಣ, ₹1.07 ಲಕ್ಷ ದಂಡ

ಎನ್.ವೆಂಕಟೇಶ್

ಕೊಟ್ಪಾ ಕಾಯ್ದೆ ಅಡಿ 80 ಬಾರಿ ಕಾರ್ಯಾಚರಣೆ- ನಾಳೆ ವಿಶ್ವ ತಂಬಾಕುರಹಿತ ದಿನ

ಚಿಕ್ಕಬಳ್ಳಾಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ (ಕೊಟ್ಪಾ ಕಾಯ್ದೆ) ಜಿಲ್ಲೆಯಲ್ಲಿ ಜನವರಿ 2024ರಿಂದ ಇದುವರೆಗೆ 80 ಬಾರಿ ಕಾರ್ಯಾಚರಣೆ ಕೈಗೊಂಡು, 1512 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 1,07,685 ರೂ. ದಂಡ ವಿಧಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಸೇರಿ ಕೋಟ್ಪಾ ಕಾಯ್ದೆ ಉಲ್ಲಂಘನೆ ಕಂಡು ಬಂದಲ್ಲಿ, ಮೊಬೈಲ್‌ನಲ್ಲಿಯೇ ಆಪ್ಲಿಕೇಷನ್ ಮೂಲಕ ಕಾನೂನುಬಾಹಿರ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ಪ್ರಕರಣ ದಾಖಲಿಸಬಹುದಾಗಿದೆ. ಧೂಮಪಾನಿಗಳಿಗೆ ತಲಾ 200 ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿರುವ ಅಂಗಡಿ ಮಾಲೀಕರು ಸೆಕ್ಷನ್ 4ರ ಧೂಮಪಾನ ನಿಷೇಧಿತ ಪ್ರದೇಶ ಎಂಬ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಸೆಕ್ಷನ್ 5ರ ಅಡಿಯಲ್ಲಿ ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹೀರಾತನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸೆಕ್ಷನ್ 6ಎ ಅಡಿಯಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಹಾಗೂ ಮಕ್ಕಳಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.


ತಂಬಾಕು ಸೇವನೆ ಬಿಟ್ಟ 142 ಜನ
2023-24ರಲ್ಲಿ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ 1,593 ವ್ಯಸನಿಗಳಿಗೆ 19,310 ನಿಕೋಟಿನ್ ಗಮ್ಸ್ ಅನ್ನು ವಿತರಿಸಿದ್ದು, ಅದರಲ್ಲಿ 142 ಮಂದಿ ತಂಬಾಕು ಸೇವನೆಯನ್ನು ತ್ಯಜಿಸಿದ್ದಾರೆ. ಇನ್ನು ತಂಬಾಕು ಸೇವನೆಯ ದುಶ್ಚಟದಿಂದ ಮುಕ್ತರಾಗಲು ಇಚ್ಛಿಸುವವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿರುವ ತಂಬಾಕು ವ್ಯಸನಮುಕ್ತ ಕೇಂದ್ರ (ಕೊಠಡಿ ಸಂಖ್ಯೆ 156) ರಲ್ಲಿ ಉಚಿತ ಸಮಾಲೋಚನೆ ಹಾಗೂ ಉಚಿತ ನಿಕೋಟಿನ್ ಗಮ್ಸ್ ಪಡೆದುಕೊಳ್ಳಬಹುದು.


ಆಂದೋಲನಗಳ ಜಾಗೃತಿ
ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಶಾಲಾ ಐಇಸಿ ಕಾರ್ಯಕ್ರಮಗಳಡಿ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವಿಶ್ವ ತಂಬಾಕು ಸೇವನೆ ವಿರೋಧಿ ದಿನದಂದು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಗುಲಾಬಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರಡಿ ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಿಗೆ ವಿದ್ಯಾರ್ಥಿಗಳು ಗುಲಾಬಿ ನೀಡುವುದರ ಮೂಲಕ ಅರಿವು ಮೂಡಿಸಲಾಗುವುದು.


ಈ ಸಾಲಿನ ಧ್ಯೇಯ ವಾಕ್ಯ
ಪ್ರತಿವರ್ಷ ಮೇ 31ರಂದು ವಿಶ್ವ ತಂಬಾಕುರಹಿತ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷದ ಧ್ಯೇಯ ವಾಕ್ಯ ತಂಬಾಕು ಉದ್ಯಮಗಳ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು ಆಗಿದೆ. ಅದರಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಹದಿಹರೆಯದವರನ್ನು ತಂಬಾಕಿನಿಂದ ದೂರವಿರಿಸುವುದು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ದೇಶದಲ್ಲಿ ಅತಿ ಹೆಚ್ಚು ತಂಬಾಕು ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಇತ್ತೀಚಿನ ದಿನಮಾನಗಳಲ್ಲಿ ಯುವ ಪೀಳಿಗೆಯು ತಂಬಾಕು ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದಕ್ಕೆ ವಿಶ್ವ ತಂಬಾಕು ರಹಿತ ದಿನ ಆಚರಣೆಯ ಮೂಲಕ ಸಾರ್ವಜನಿಕರು ಹಾಗೂ ಮಕ್ಕಳ ಮೇಲೆ ತಂಬಾಕು ಉದ್ಯಮಗಳು ಯಾವ ರೀತಿ ಹಸ್ತಕ್ಷೇಪ ಮಾಡುತ್ತಿವೆ ಎಂಬುದರ ಕುರಿತು ಅರಿವು ಮೂಡಿಸಲಾಗುತ್ತಿದೆ.


ಪ್ರತಿವರ್ಷ 60 ಲಕ್ಷಕ್ಕೂ ಹೆಚ್ಚು ಬಲಿ
ತಂಬಾಕು ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳಿವೆ. ಇದರ ಸೇವನೆಯಿಂದಾಗಿ ಬರುವ ಕಾಯಿಲೆಗಳಿಗೆ ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ಬಲಿಯಾಗುತ್ತಿದ್ದಾರೆ. ಆದರೂ ನಿರ್ಲಕ್ಷ್ಯ ತೋರುವುದೇ ಹೆಚ್ಚಾಗಿದ್ದು ಇದರ ನಿಯಂತ್ರಣಕ್ಕೆ ಕಠಿಣ ಕಾಯ್ದೆ ಜಾರಿಯಲ್ಲಿದ್ದರೂ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ.


ತಂಬಾಕು ಉತ್ಪನ್ನಗಳ ಸೇವನೆ ಹಾನಿಕಾರಕ. ಇದರಿಂದ ಸ್ವಯಂ ದೂರವಿರುವುದರ ಜತೆಗೆ ಇತರರನ್ನು ದುಶ್ಚಟಗಳಿಗೆ ದಾಸರಾಗದಂತೆ ನೋಡಿಕೊಳ್ಳಬೇಕು.
-ಡಾ. ಮಹೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಚಿಕ್ಕಬಳ್ಳಾಪುರ