ಜಿಲ್ಲೆ

ಬಿರ್ಸಾ ಮುಂಡಾ ನಾಯಕತ್ವ ಯುವಕರಿಗೆ ಸ್ಫೂರ್ತಿ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರು ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡು ಬ್ರಿಟಿಷರ ವಸಹಾತುಶಾಹಿ ಶೋಷಣೆಯ ವಿರುದ್ಧ ಸಿಡಿದೆದ್ದು ಹೋರಾಡಿದರು. ಇಂದಿನ ಯುವ ಸಮೂಹಕ್ಕೆ ಇವರ ಧೈರ್ಯ, ನಾಯಕತ್ವ ಗುಣಗಳು ಸ್ಪೂರ್ತಿಯಾಬೇಕು ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಹೇಳಿದರು.

ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯಲ್ಲಿ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. 1890 ರ ದಶಕದಲ್ಲಿ ಬಿರ್ಸಾ ಮುಂಡಾ ಅವರು 25ನೇ ವಯಸ್ಸಿಗೆ ಬ್ರಿಟಿಷರ ಶೋಷಣೆಯ ವಿರುದ್ಧ ಹೋರಾಟ ಮಾಡಿದವರು. ಬ್ರಿಟಿಷ್ ಅಧಿಕಾರಿಗಳು ತಮ್ಮ ಬುಡಕಟ್ಟು ಜನಾಂಗದವರ ಮೇಲೆ ಶೋಷಣೆಗೆ ಮುಂದಾದಾಗ ಹಾಗೂ ಅವರ ಭೂಮಿ, ಆಚಾರ, ವಿಚಾರಗಳ ಮೇಲೆ ದೌರ್ಜನ್ಯ ಎಸಗಲು ಮುಂದಾದಾಗ ಅದರ ವಿರುದ್ಧ ಸಿಡಿದ್ದೆದ್ದು ತಮ್ಮ ಹಕ್ಕುಗಳಿಗೆ ಹೋರಾಡಲು ನಾಯಕತ್ವ ವಹಿಸಿಕೊಂಡು ಹೋರಾಡಿದರು. ಹಾಗಾಗಿ ಅವರ ಜನ್ಮದಿನದ ಸ್ಮರಣಾರ್ಥ ‘ಜನ್ ಜಾತಿಯ ಗೌರವ್ ದಿವಸ್’ ಎಂದು ಆಚರಿಸಲಾಗುತ್ತದೆ. ಇತಿಹಾಸದಲ್ಲಿ ಇವರ ಧೈರ್ಯ, ಸಾಹಸ ಮತ್ತು ನಾಯಕತ್ವದ ಗುಣಗಳು ಯುವಕರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

ಕೆಚ್ಚೆದೆಯ ಹೋರಾಟ: ನ.15 ದೇಶದಾದ್ಯಂತ ಬುಡಕಟ್ಟು ಸಮುದಾಯಗಳಿಂದ ಭಗವಾನ್ ಎಂದು ಪೂಜಿಸಲ್ಪಡುವ ಬಿರ್ಸಾ ಮುಂಡಾ ಅವರ ಜನ್ಮದಿನವಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪಾಂಡುರಂಗ ಹೇಳಿದರು. ಬಿರ್ಸಾ ಮುಂಡಾ ಅವರು ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆಯ ಶೋಷಣೆಯ ವ್ಯವಸ್ಥೆ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದರು ಮತ್ತು ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಚಳುವಳಿ ಆರಂಭಿಸಿ ಬೃಹತ್ ಚಳುವಳಿಗೆ ಕರೆ ನೀಡಿದರು. ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ ಎಂದರು. 1875 ರ ನ.15 ರಂದು ಇಂದಿನ ಜಾರ್ಖಂಡ್‌ನ ಉಲಿಹಾತು ಗ್ರಾಮದಲ್ಲಿ ಜನಿಸಿದ ಬಿರ್ಸಾ ಅವರು ಬಾಲ್ಯವನ್ನು ಬುಡಕಟ್ಟು ಮುಂಡಾ ಕುಟುಂಬದಲ್ಲಿ ಕಡು ಬಡತನದಲ್ಲಿ ಕಳೆದರು. ಎಲ್ಲ ಆದಿವಾಸಿಗಳ ಧಾರ್ಮಿಕ ಆಚರಣೆಗಳನ್ನು ಸುಧಾರಿಸಲು ಕೆಲಸ ಮಾಡಿದರು, ಅನೇಕ ಮೂಢನಂಬಿಕೆಗಳನ್ನು ವಿರೋಧಿಸಿದರು, ಹೊಸ ತತ್ವಗಳನ್ನು ತಂದರು ಬುಡಕಟ್ಟು ಹೆಮ್ಮೆಯನ್ನು ಮರುಸ್ಥಾಪಿಸಲು ಮತ್ತು ಪುನರುಜ್ಜೀವನಗೊಳಿಸಲು ಕೆಲಸ ಮಾಡಿದರು ಎಂದು ಗುಣಗಾನ ಮಾಡಿದರು.