ಜಿಲ್ಲೆ

ಬಿಜೆಪಿ ಅಭ್ಯರ್ಥಿ ಡಾ. ಪಾಟೀಲ ಪ್ರಚಾರ

Belagavi

ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರು ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸೋಮವಾರ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದರು.
ಸದಾಶಿವ ನಗರದ ಮಾರುತಿ ಮಂದಿರಕ್ಕೆ ಭೇಟಿ ನೀಡಿದ ದರ್ಶನ ಪಡೆದ ಅವರು, ಮೊದಲಿಗೆ ಸದಾಶಿವನಗರ ಹಾಗೂ ಶಿವಾಲಯ ರಸ್ತೆಯಲ್ಲಿ ಸಂಚರಿಸಿ ಮತಯಾಚಿಸಿದರು. ಬಳಿಕ ಹರಿಮಂದಿರ ಗಣೇಶಚೌಕ, ಅಂಬೇಡ್ಕರ್ ನಗರ, ಬೆಲ್ದಾರ ಛಾವಣಿ ಪ್ರಚಾರ ಕಾರ್ಯ ಕೈಗೊಂಡರು.

ಸಂಜೆ ಶಾಹುನಗರದ ಸಂತೋಷಿಮಾ ಗಲ್ಲಿ, ಸಮರ್ಥ ಗಲ್ಲಿ, ಗಣೇಶ ಮಂದಿರ ಮಾರ್ಗ, ಅನ್ನಪೂರ್ಣವಾಡಿಯಲ್ಲಿ ಪ್ರಚಾರ ನಡೆಸಿದರು. ರಾತ್ರಿ 8 ಗಂಟೆಗೆ ಖಡೇಬಜಾರ್ ಎದುರಿನ ಹೇಮಗಿರಿ ಕ್ಲೋಥ್ ಸ್ಟೋರ್‌ನಲ್ಲಿ ನಾಮದೇವ ಶಿಂಪಿ ಜೋಶಿ ಸಮಾಜದ ಸಭೆ ನಡೆಸಿದರು.

ಬಳಿಕ ರುಕ್ಮೀಣಿ ನಗರದ ಲಕ್ಷ್ಮೀ ನಾರಾಯಣ ದೇವಸ್ಥಾನ ಕಮಿಟಿ ಸಭೆ ಹಾಗೂ ಸಾರ್ವಜನಿಕ ಸಭೆ ನಡೆಸಿದರು. ಬಳಿಕ ರುಕ್ಷ್ಮೀಣಿ ನಗರದ ಸಾಯಿರಾಜ ಕಾಲನಿಯಲ್ಲಿ ಸಾರ್ವಜನಿಕರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಡಾ. ರವಿ ಪಾಟೀಲ ಅವರು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಹತ್ತು, ಹಲವು ಜನಪರ ಕಾರ್ಯಗಳನ್ನು ಮಾಡಿವೆ. ವಿವಿಧ ಯೋಜನೆಗಳ ಫಲಾನುಭವಿಗಳಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುವಂತೆ ಪಾರದರ್ಶಕ ಉಪಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಬಿಜೆಪಿ ಮತ ನೀಡಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಕೋರಿದರು. ಸ್ಥಳೀಯ ಸಮಸ್ಯೆಗಳು ಏನೇ ಇದ್ದರೂ ನಾವು ನಿವಾರಿಸುತ್ತೇವೆಂದು ಭರವಸೆ ನೀಡಿದರು.

ಪ್ರಚಾರದ ವೇಳೆ ಬಿಜೆಪಿ ಪ್ಯಾಂಪ್ಲೆಟ್‌ಗಳನ್ನು ನಾಗರಿಕರಿಗೆ ನೀಡಿದರು. ಮತಯಾಚನೆ ವೇಳೆ ಬಹಳಷ್ಟು ಕಡೆಗಳಲ್ಲಿ ಮಹಿಳೆಯರು ಡಾ. ರವಿ ಪಾಟೀಲ ಅವರನ್ನು ಆರತಿ ಬೆಳಗಿ ಸ್ವಾಗತಿಸಿದರು. ಕ್ಷೇತ್ರ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಗೆ, ಅಂಗಡಿಕಾರರಿಗೆ ಬಿಜೆಪಿಗೆ ಮತ ನೀಡಿ, ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು. ಪ್ರಚಾರಕ್ಕೆ ತೆರಳಿದ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಾಲಿಕೆಯ ಬಿಜೆಪಿ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಪ್ರಚಾರಕ್ಕೆ ಸಾಥ್ ನೀಡಿದರು.