ಮೈಸೂರು: ಶಿವರಾತ್ರಿ ಹಬ್ಬ ಪ್ರಯುಕ್ತ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಪ್ರಸಿದ್ಧ ಕಾಶಿ ವಿಶ್ವನಾಥ ದರ್ಶನ ಕಾರ್ಯಕ್ರಮವನ್ನು ಫೆ.19ರಿಂದ ಮಾರ್ಚ್ 2ರವರೆಗೆ ವಿಜಯನಗರ ಮೊದಲನೇ ಹಂತದ ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿನ ಮುಡಾ ಖಾಲಿ ನಿವೇಶನದಲ್ಲಿ ಏರ್ಪಡಿಸಲಾಗಿದೆ.
ಫೆ.19ರಂದು ಸಂಜೆ 6.30ಕ್ಕೆ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ನಾಡೋಜ ಪ್ರೊ.ಭಾಷ್ಯಂ ಸ್ವಾಮಿ ಆಶೀರ್ವಚನ ನೀಡುವರು. ಮುಡಾ ಆಯುಕ್ತ ಎ.ಎನ್.ರಘುನಂದನ್ ಪಾಲ್ಗೊಳ್ಳುವರು. ಮಾರ್ಚ್ 2ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ರಾಜಯೋಗಿನಿ ಬ್ರಹ್ಮಾಕುಮಾರಿ ಬಿ.ಕೆ. ಲಕ್ಷ್ಮೀಜಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿತ್ಯ ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಸಾರ್ವಜನಿಕರಿಗೆ ಪ್ರವೇಶವಿದೆ. ಇಲ್ಲಿ 150 ಅಡಿ ಉದ್ದ, 50 ಅಡಿ ಎತ್ತರದ ಕಾಶಿ ವಿಶ್ವನಾಥ ಮಂದಿರದ ಪ್ರತಿರೂಪ ಆಕರ್ಷಿಸಲಿದೆ. 21 ಅಡಿ ಎತ್ತರದ ಶಿವಲಿಂಗ, ಮಾದಕ ದ್ರವ್ಯ ಸೇವನೆ ವಿರುದ್ಧ ಜಾಗೃತಿ ಮೂಡಿಸುವ ಕುಂಭಕರ್ಣ, ಗೃಹಸ್ಥದಲ್ಲಿ ಸಾಮರಸ್ಯದಿಂದಿರಲು ಪ್ರಾಯೋಗಿಕ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ಮನಸ್ಸಿನ ಮಸಾಜ್ ಮಾಡುವ ಐದು ನಿಮಿಷಗಳ ಕಂಪ್ಯೂಟರ್ ಪ್ರೋಗ್ರಾಂ, ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಮತ್ತು ಗುರಿ ಸಾಧನೆಯ ಬಗ್ಗೆ ಸಮಾಲೋಚನೆ, ಮೌಲ್ಯ ಪ್ರಯೋಗ ವಿವರಿಸುವ ಆಟ, ಪ್ರತಿದಿನ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಚಿಂತನ, ಧ್ಯಾನ ಮೊದಲಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘಟನೆಯ ರಂಗನಾಥ್, ರಾಮಚಂದ್ರರಾವ್ ಇದ್ದರು.