ಕುಂದಗೋಳ: ತಾಲೂಕಿನ ದೇವನೂರು ಗ್ರಾಮದ ಬಳಿಯ ಬೆಣ್ಣೆ ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ಮೂವರು ಕುರಿಗಾಹಿಗಳು ಹಾಗೂ 150 ಕುರಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.
ಗ್ರಾಮದ ಯಲ್ಲಪ್ಪ ಬೆನಕನಹಳ್ಳಿ, ಹನಮಂತ ಬೆನಕನಹಳ್ಳಿ, ಮಂಜಪ್ಪ ಬೆನಕನಹಳ್ಳಿ ಎಂಬುವರು ಎಂದಿನಂತೆ ಕುರಿ ಮೇಯಿಸಲು ಬೆಣ್ಣೆ ಹಳ್ಳದ ಬಳಿ ತೆರಳಿದ್ದರು. ಈ ವೇಳೆ ಏಕಾಏಕಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ಕುರಿಗಾಹಿಗಳು ಕುರಿಗಳೊಂದಿಗೆ ಹಳ್ಳ ದಾಟಲು ಆಗದಂತಾಗಿತ್ತು. ಆಗ ಯಲ್ಲಪ್ಪ ಅವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಪ್ರವೃತ್ತರಾಗಿ ರಭಸದಿಂದ ಹರಿಯುತ್ತಿರುವ ನೀರಿನ ಮಧ್ಯೆ 150 ಕುರಿಗಳು ಹಾಗೂ ಮೂವರು ಕುರಿಗಾಹಿಗಳನ್ನು ಹಗ್ಗದ ಸಹಾಯದಿಂದ ಪ್ರವಾಹದಿಂದ ಪಾರು ಮಾಡಿದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿ ಆರ್.ಎಂ. ಬೇಪಾರಿ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಅಲ್ಲಾಭಕ್ಷ ಕಾಲಯಿಗಾರ , ಶಂಕರ ಗುಳ್ಳನವರ, ರಾಜು ಜಾಧವ, ವಿಜಯ ಎಚ್., ಸತೀಶ, ಮಂಜುನಾಥ, ಹೊನ್ನಪ್ಪ ಇದ್ದರು.