ಗಜೇಂದ್ರಗಡ: ಪಟ್ಟಣದ ಹೊರವಲಯದಲ್ಲಿ ಸಂಗ್ರಹಿಸಿದ್ದ 150ಕ್ಕೂ ಅಧಿಕ ಅನ್ನಭಾಗ್ಯದ ಅಕ್ಕಿಚೀಲಗಳನ್ನು ಶನಿವಾರ ಜಪ್ತಿ ಮಾಡಲಾಗಿದೆ.
ಗೌಡಗೇರಿ ಗ್ರಾಮದ ಬಳಿಯ ಗೋದಾಮಿನಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ದಾಸ್ತಾನು ಮಾಡಿರುವ ಖಚಿತ ಮಾಹಿತಿ ಆಧರಿಸಿ ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ಬಡವರ ಹಸಿವು ನೀಗಿಸಲು ರಾಜ್ಯ ಸರ್ಕಾರ ಪಡಿತರ ವ್ಯವಸ್ಥೆ ಮೂಲಕ ವಿತರಿಸುತ್ತಿರುವ ಅನ್ನಭಾಗ್ಯದ ಅಕ್ಕಿಯನ್ನು ಕೆಲವರು ಮಾರಾಟ ಮಾಡುತ್ತಾರೆ ಎಂಬ ದೂರುಗಳು ಕೇಳಿಬರುತ್ತಲಿವೆ. ಗಜೇಂದ್ರಗಡ ಹಾಗೂ ತಾಲೂಕಿನ ಕೆಲ ಗ್ರಾಮಗಳಲ್ಲಿ ಕೆಲವರು ಅನ್ನಭಾಗ್ಯದ ಅಕ್ಕಿಯನ್ನು ಖರೀದಿಸಿ ವರ್ತಕರಿಗೆ ಮಾರುತ್ತಾರೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಗದಗ ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ(ಸಿಇಎನ್) ಸೈಬರ್ ಠಾಣೆಯ ಪೊಲೀಸರು ನೀಡಿದ ಸುಳಿವು ಆಧರಿಸಿ ತಾಲೂಕು ಆಹಾರ ನಿರೀಕ್ಷಕರು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.
ದಾಳಿ ವೇಳೆ ಗೋದಾಮು ಬಳಿಯಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ‘ಗೋದಾಮಿನಲ್ಲಿರುವ ಅಕ್ಕಿಗೆ ಜಿಎಸ್‌ಟಿ ಬಿಲ್ ಇದ್ದು, ಪಟ್ಟಣದಿಂದ ಗಂಗಾವತಿಗೆ ಅಕ್ಕಿಯನ್ನು ರವಾನಿಸಲಾಗುತ್ತಿದೆ’ ಎಂದು ಹೇಳಿದ್ದಾರೆ. ಅಧಿಕಾರಿಗಳು ಆತನಿಗೆ ಗೋದಾಮಿನ ಬೀಗ ತೆಗೆಯುವಂತೆ ಕೇಳಿದ್ದಾರೆ. ಸ್ಥಳದಲ್ಲಿದ್ದ ವ್ಯಕ್ತಿ ‘ಬೀಗ ನನ್ನ ಬಳಿ ಇಲ್ಲ, ತರಿಸುತ್ತೇನೆ’ ಎಂದು ಹೇಳುತ್ತಾ 2 ತಾಸು ಕಾಯಿಸಿದ್ದಾನೆ. ಇದರಿಂದ ಕೋಪಗೊಂಡ ಅಧಿಕಾರಿಗಳು ಗೋದಾಮಿನ ಬೀಗ ಒಡೆದು ಒಳಪ್ರವೇಶಿಸಿ ವ್ಯಕ್ತಿ ನೀಡಿದ್ದ ಬಿಲ್ ಹಾಗೂ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಅಕ್ಕಿಯನ್ನು ಪರಿಶೀಲಿಸಿದ್ದಾರೆ. 150ಕ್ಕೂ ಅಧಿಕ ಅಕ್ಕಿ ಚೀಲಗಳಿರುವುದು ಕಂಡುಬಂದಿದೆ. ಬಿಲ್‌ನಲ್ಲಿರುವ ಅಕ್ಕಿಪ್ರಮಾಣ ಮತ್ತು ಗೋದಾಮಿನಲ್ಲಿ ಸಂಗ್ರಹಿಸಿರುವ ಅಕ್ಕಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆಯ ನಿರೀಕ್ಷಕ ಮಂಜುನಾಥ ತಳ್ಳಿಹಾಳ ತಿಳಿಸಿದ್ದಾರೆ.
ಸಿಇಎನ್ ಠಾಣೆಯ ಪಿಎಸ್‌ಐ ಲಕ್ಷ್ಮಣ ಗೌಡಿ, ಗಜೇಂದ್ರಗಡ ಪಿಎಸ್‌ಐ ಸೋಮನಗೌಡ, ಆಹಾರ ಇಲಾಖೆ, ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಗಜೇಂದ್ರಗಡ ಬಳಿಯ ಗೌಡಗೇರಿಯಲ್ಲಿ ಪೊಲೀಸರೊಂದಿಗೆ ದಾಳಿ ಮಾಡಿ ಅಕ್ಕಿ ವಶಪಡಿಸಿಕೊಂಡು, ಗೋದಾಮಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ. ಅಲ್ಲಿ ಅಕ್ಕಿ ಸಂಗ್ರಹಿಸಿದವರು ಯಾರು?. ಗೋದಾಮು ಯಾರಿಗೆ ಸಂಬಂಧಿಸಿದೆ ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ.-ಗಂಗಪ್ಪ, ಜಿಲ್ಲಾ ಆಹಾರ ಇಲಾಖೆ ಅಧಿಕಾರಿ ಗಜೇಂದ್ರಗಡದಲ್ಲಿ ಅಕ್ಕಿ ಸಂಗ್ರಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಈ ಬಗ್ಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅಕ್ರಮ ಅಕ್ಕಿ ಸಾಗಾಟದ ಮೇಲೆ ದಾಳಿ ಮುಂದುವರಿಯಲಿದೆ.-ವೈಶಾಲಿ ಎಂ.ಎಲ್, ಜಿಲ್ಲಾಧಿಕಾರಿ